ಪಂಜಾಬ್ (ಭಾರತ) -
ಭಾರತ ಗಣರಾಜ್ಯದ ಒಂದು ರಾಜ್ಯ. ದೇಶದ ವಾಯವ್ಯ ಭಾಗದಲ್ಲಿದೆ. ಉತ್ತರದಿಂದ ಪಶ್ಚಿಮದವರೆಗೆ ಅನುಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಪಾಕಿಸ್ತಾನಗಳು ಸುತ್ತುವರಿದಿರುವ ಈ ರಾಜ್ಯದ ಹೆಸರು ಪಾಂಚ್ (ಐದು) ಮತ್ತು ಆಬ್ (ನದಿಗಳು) ಎಂಬ ಎರಡು ಪದಗಳ ಕೂಡುವಿಕೆಯಿಂದ ಆಗಿದೆ. ಸಿಂಧುವಿನ ಐದು ಉಪನದಿಗಳಾದ ಝೀಲಂ, ಚೀನಾಬ್, ರಾವಿ, ಬೀಯಾಸ್, ಮತ್ತು ಸಟ್ಲೆಜ್‍ಗಳೂ ಹಿಂದೆ ಪಂಜಾಬ್ ಎನಿಸಿಕೊಂಡಿದ್ದ ಪ್ರದೇಶದಲ್ಲಿ ಹರಿಯುತ್ತಿದ್ದವು. 1947 ರಲ್ಲಿ ಭಾರತದ ವಿಭಜನೆಯಾದ ಮೇಲೆ ಭಾರತದಲ್ಲಿ ಉಳಿದ ಪಂಜಾಬ್ ರಾಜ್ಯದಲ್ಲಿ ಸಟ್ಲೆಜ್ ಮತ್ತು ಬೀಯಾಸ್ ನದಿಗಳು ಮಾತ್ರ ಹರಿಯುತ್ತವೆ. ಈಗಿನ ಪಂಜಾಬ್ ರಾಜ್ಯದ ಸ್ವರೂಪ ನಿರ್ಣಯವಾದ್ದು ಇದರ ವಿಸ್ತೀರ್ಣ 50,362 ಚ.ಕಿ.ಮೀ; ಜನಸಂಖ್ಯೆ 2,02,81,969 (2001). ರಾಜಧಾನಿ ಚಂಡೀಗಢ. ಕೇಂದ್ರಾಡಳಿತಕ್ಕೆ ಸೇರಿರುವ ಇದರ ವಿಸ್ತೀರ್ಣ 114ಚ.ಕಿ.ಮೀ. ಜನಸಂಖ್ಯೆ 900,914 (2001).

ಮೇಲ್ಮೈಲಕ್ಷಣ : ಪಂಜಾಬಿನ ಬಹುಭಾಗ ಮೈದಾನ. ಇದು ಈಶಾನ್ಯದಿಂದ ನೈಋತ್ಯದ ಕಡೆಗೆ ಇಳಿಜಾರಾಗಿದೆ. ರಾಜ್ಯವನ್ನು ಭೌಗೋಳಿಕವಾಗಿ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಈಶಾನ್ಯದಲ್ಲಿ ಸಮುದ್ರಮಟ್ಟದಿಂದ 274 ಮೀ.ಗಳಿಂದ 914 ಮೀ. ಗಳವರೆಗೆ ಎತ್ತರವಾಗಿರುವ ಶಿವಾಲಿಕ್ ಬೆಟ್ಟಗಳದು ಮೊದಲನೆಯ ವಿಭಾಗ. ಈ ವಿಭಾಗದ ವಿಸ್ತೀರ್ಣ ಇಡೀ ರಾಜ್ಯದ ವಿಸ್ತೀರ್ಣದಲ್ಲಿ ಅಲ್ಪ, ಬೆಟ್ಟಗಳ ತಪ್ಪಲಿನ ಪ್ರದೇಶ ಎರಡನೆಯ ವಿಭಾಗ. ಇಲ್ಲಿ ನೆಲ ಅಲೆಯಲೆಯಾಗಿ ಏರಿಳಿದಿದೆ. ಮಳೆಗಾಲದಲ್ಲಿ ವೇಗವಾಗಿ ಹರಿಯುವ ತೊರೆಗಳು ಈ ಕಿರಿದಾದ ಪ್ರದೇಶವನ್ನು ಅಲ್ಲಲ್ಲಿ ಕೊರೆದಿವೆ. ಈ ತೊರೆಗಳು ಮೈದಾನದಲ್ಲಿ ಕೊನೆಗೊಳ್ಳುತ್ತವೆ. ಚಪ್ಪಟೆಯಾದ, ಹಾಗೂ ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿದ ಮೈದಾನ ಇದರ ಮೂರನೆಯ ವಿಭಾಗ. ನದಿಗಳ ಎರಡೂ ಬದಿಗಳ ನೆಲ ತಗ್ಗಾಗಿಯೂ ಇವುಗಳ ನಡುವಣ ಪ್ರದೇಶ ಸ್ವಲ್ಪ ಎತ್ತರವಾಗಿಯೂ ಇವೆ. ನೈಋತ್ಯದಲ್ಲಿ ಅಲ್ಲಲ್ಲಿ ಮರಳ ದಿಬ್ಬಗಳುಂಟು.

ವಾಯುಗುಣ : ಪಂಜಾಬಿನ ವಾಯುಗುಣ ಸಾಮಾನ್ಯವಾಗಿ ಒಳನಾಡಿನ ಉಪೋಷ್ಣವಲಯದ್ದು. ಕೆಲವು ಭಾಗ ಅರೆ ಒಣ ಬಯಲು; ಇನ್ನು ಕೆಲವು ಭಾಗ ಸ್ವಲ್ಪ ಆದ್ರ್ರವಾಗಿರುತ್ತದೆ. ಬೇಸಗೆ ಬಹಳ ಬಿಸಿಯಾಗಿರುತ್ತದೆ. ಚಳಿಗಾಲದಲ್ಲಿ ಚಳಿಯೂ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಜೂನಿನ ಮಾಧ್ಯ ಉಷ್ಣತೆ 34ಡಿಗ್ರಿ ಸೆ. ಇದು 45ಡಿಗ್ರಿ ಸೆ. ವರೆಗೂ ಏರುವುದುಂಟು. ಜನವರಿಯಲ್ಲಿ ಮಾಧ್ಯ ಉಷ್ಣತೆ 13ಡಿಗ್ರಿ ಸೆ. ಒಮ್ಮೊಮ್ಮೆ ರಾತ್ರಿಯ ವೇಳೆಯಲ್ಲಿ ನೀರು ಗಡ್ಡೆಕಟ್ಟುವ ಬಿಂದುವಿನವರೆಗೂ ಇದು ಇಳಿಯುವುದುಂಟು. ಜುಲೈನಿಂದ ಸೆಪ್ಟಂಬರ್‍ವರೆಗಿನ ಮುಂಗಾರಿನ ಕಾಲದಲ್ಲೇ ರಾಜ್ಯದ ಒಟ್ಟು ವಾರ್ಷಿಕ ಮಳೆ ಶೇ. 70 ರಷ್ಟು ಬೀಳುತ್ತದೆ. ಶಿವಾಲಿಕ್ ಬೆಟ್ಟಗಳ ಪ್ರದೇಶದಲ್ಲಿ ಗರಿಷ್ಠ ಮಳೆ (1.245 ಮಿ.ಮೀ.) ಆಗುತ್ತದೆ. ನೈಋತ್ಯಕ್ಕೆ ಬಂದಂತೆ ಇದು ಕಡಿಮೆಯಾಗುತ್ತದೆ.  ನೈಋತ್ಯದಲ್ಲಿ ವಾರ್ಷಿಕ ಮಳೆ 356 ಮಿ.ಮೀ. ಒಟ್ಟು ಮಳೆಯಲ್ಲಿ ಶೇ. 15 ರಷ್ಟು ಡಿಸೆಂಬರ್ ನಿಂದ ಮಾರ್ಚ್‍ವರೆಗಿನ ಅವಧಿಯಲ್ಲಿ ಆಗುತ್ತದೆ.

ಸಸ್ಯಸಂಪತ್ತು : ಪಂಜಾಬ್ ಪ್ರದೇಶದಲ್ಲಿ ಅನೇಕ ಶತಮಾನಗಳಿಂದ ಜನರು ನೆಲಸಿದ್ದಾರೆ. ಆದ್ದರಿಂದ ಇಲ್ಲಿಯ ಸ್ವಾಭಾವಿಕ ಸಸ್ಯಸಂಪತ್ತು ಬಹುವಾಗಿ ನಷ್ಟವಾಗಿದೆ. ಇಲ್ಲಿಯದು ಉಷ್ಣವಲಯದ ಪರ್ಣಪಾತಿ ಸಸ್ಯವರ್ಗ, ಶಿಷ್ಟಬಾಗೆ, ಅರಳಿ, ಎಲಚಿ ಮತ್ತು ಗೊಬ್ಬಳಿ ಮರಗಳು ಸಾಮಾನ್ಯ, ಶಿವಾಲಿಕ್ ಬೆಟ್ಟಗಳಲ್ಲಿದ್ದ ಮರಗಳನ್ನು ಬಹುತೇಕ ಕಡಿಯಲಾಗಿದೆ. ಆಲ್ಲಿ ಈಗ ಪೊದೆಗಳು ಹೆಚ್ಚಾಗಿವೆ. ಅಲ್ಲಲ್ಲಿ ಹೊಸ ಮರಗಳನ್ನು ನೆಡಲಾಗಿದೆ.

ಪ್ರಾಣಿಜೀವನ : ನೀಲ್ಗಾಯ್, ಕಾಡುಹಂದಿ, ಮೊಲ, ನರಿ, ಜಿಂಕೆ ಇವು ಇಲ್ಲಿಯ ಕೆಲವು ಮುಖ್ಯ ವನ್ಯಮೃಗಗಳು. ಕಾಗೆ, ಗುಬ್ಬಚ್ಚಿ, ಪಾರಿವಾಳ, ಗಿಳಿ, ಕೋಗಿಲೆ, ಕೊಕ್ಕರೆ, ಕಬ್ಬಾರೆ ಮತ್ತು ಬಾತುಗಳು ಇವೆ. ಬೇಸಗೆಯಲ್ಲಿ ಹಾವುಗಳು ಹೆಚ್ಚು. ನಾಗರಹಾವು, ಮಂಡಲಹಾವು, ಕಟ್ಟುಹಾವು ಅಧಿಕವಾಗಿವೆ. ವ್ಯವಸಾಯಕ್ಕಾಗಿ ಬಹುಪಾಲು ನೆಲವನ್ನು ಆಬಾದು ಮಾಡಿರುವುದರಿಂದ ವನ್ಯಪ್ರಾಣಿಗಳು ಕಡಿಮೆಯಾಗುತ್ತಿವೆ.

ಜನಜೀವನ : ವಾಯವ್ಯದಿಂದ ಭಾರತವನ್ನು ಪ್ರವೇಶಿಸಿದ ಆರ್ಯರು ಮೊದಲು ಇಲ್ಲಿ ನೆಲಸಿದರು. ಚಂಡೀಗಢದ ಬಳಿ ಇರುವ ರೂಪಾರ್‍ದಲ್ಲಿ ಹಳೆಯ ಆರ್ಯನಾಗರಿಕತೆಯ ಅವಶೇಷಗಳಿವೆ. ಅನಂತರ ಗ್ರೀಕರೂ ಪಾರ್ಥಿಯನರೂ ಕುಷಾಣರೂ ಹೂಣರೂ ಬಂದು ಆರ್ಯರೊಂದಿಗೆ ಬೆರೆತರು. ಆರ್ಯರು ಬರುವುದಕ್ಕೆ ಮುಂಚೆ ಇಲ್ಲಿ ಇದ್ದ ಜನಾಂಗಗಳ ವಂಶೀಯರು ಇದ್ದಾರೆ.
ಪಂಜಾಬಿನ ಬಹುಸಂಖ್ಯಾತರು ಸಿಕ್ಖರು. ಇವರು ಒಟ್ಟು ಜನಸಂಖ್ಯೆಯ ಶೇ. 60ರಷ್ಟಿದ್ದಾರೆ. ಹಿಂದುಗಳು ಶೇ. 38ರಷ್ಟು. ಮುಸ್ಲಿಮರೂ ಕ್ರೈಸ್ತರೂ ತಲಾ ಶೇ. 1ರಷ್ಟು ಇದ್ದಾರೆ. ಉಳಿದ ಶೇ. 1 ರಷ್ಟು ಜನರ ಜೈನರು, ಬೌದ್ಧರು ಇತ್ಯಾದಿ. ಪಂಜಾಬಿನಲ್ಲಿ ಮೂರನೆಯ ಎರಡರಷ್ಟು ಜನರ ಮಾತೃಭಾಷೆ ಪಂಜಾಬಿ, ಉಳಿದವರದು ಸಾಮಾನ್ಯವಾಗಿ ಹಿಂದಿ.
ಪಂಜಾಬಿನ ಜನಸಂಖ್ಯೆಯಲ್ಲಿ ಕಾಲುಭಾಗದಷ್ಟು ಜನರು ನಗರ ಪಟ್ಟಣಗಳಲ್ಲಿ ವಾಸಿಸುತ್ತಾರೆ. ಇಡೀ ಭಾರತದಲ್ಲಿ ನಗರ ಪಟ್ಟಣಗಳಲ್ಲಿ ವಾಸಿಸುತ್ತಾರೆ. ಇಡೀ ಭಾರತದಲ್ಲಿ ನಗರ ಪಟ್ಟಣಗಳಲ್ಲಿ ವಾಸಿಸುವವರ ಶೇಕಡ, ಪ್ರಮಾಣ 20. ಪಂಜಾಬಿನ ಪ್ರಮುಖ ನಗರಗಳು ಅಮೃತಸರ (30,74,207) (2005), ಲೂಧಿಯಾನ (30,30,352), ಜಲಂಧರ್ (19,53,508) ಮತ್ತು ಪಟಿಯಾಲಾ (18,39056). ಪಂಜಾಬಿನ ರಾಜಧಾನಿಯಾದ ಚಂಡೀಗಢ ಒಕ್ಕೂಟ ಪ್ರದೇಶ. ಪಂಜಾಬ್ ಹರಿಯಾಣಗಳೆರಡಕ್ಕೂ ಇದು ರಾಜಧಾನಿ. ಇದರ ಜನಸಂಖ್ಯೆ 2,32,940 (1971).

ಕೃಷಿ : ಭಾರತದಲ್ಲಿ ಸಾಗುವಳಿಗೆ ಒಳಪಟ್ಟಿರುವ ಜಮೀನಿನಲ್ಲಿ ಶೇ. 2.9 ರಷ್ಟು ಮಾತ್ರ ಪಂಜಾಬಿನಲ್ಲಿದೆಯಾದರೂ ದೇಶದ ಒಟ್ಟು ಆಹಾರಧಾನ್ಯದಲ್ಲಿ ಶೇ. 7 ರಷ್ಟು ಇಲ್ಲಿ ಬೆಳೆಯುತ್ತದೆ. ಭಾರತದ ಗೋಧಿ ಬೆಳೆಯ ಶೇ. 24ರಷ್ಟು ಬೆಳಯುವುದು ಇಲ್ಲಿ. ಹತ್ತು ವರ್ಷಗಳಲ್ಲಿ ಇಲ್ಲಿಯ ಗೋಧಿ ಬೆಳೆ ಇಮ್ಮಡಿಗಿಂತ ಹೆಚ್ಚಾಗಿದೆ. ಹಸುರು ಕ್ರಾಂತಿಯೊಂದು ಇದನ್ನು ಬಣ್ಣಿಸಲಾಗಿದೆ. ಪಂಜಾಬಿನ ಮುಖ್ಯ ಬೆಳೆಗಳು ಗೋಧಿ, ಮುಸುಕಿನ ಜೋಳ, ಬತ್ತ ಬಾಜ್ರಾ, ಬಾರ್ಲಿ ಮತ್ತು ಬೇಳೆಗಳು. ಇಲ್ಲಿ ಹತ್ತಿ, ಕಬ್ಬು, ಆಲೂಗಡ್ಡೆ ಮತ್ತು ಎಣ್ಣೆ ಬೀಜಗಳೂ ಬೆಳೆಯುತ್ತವೆ. ಪಂಜಾಬ್ ಭಾರತದ ಧಾನ್ಯಗಳ ಕಣಜ ಎಂಬ ಹೆಸರು ಪಡೆದಿದೆ.
ರಾಜ್ಯದಲ್ಲಿ ಸಾಗುವಳಿಗೆ ಒಳಪಟ್ಟಿರುವ ನೆಲದಲ್ಲಿ ಶೇ. 67ಕ್ಕೂ ಹೆಚ್ಚು ಭಾಗಕ್ಕೆ ನೀರಾವರಿ ಸೌಲಭ್ಯವಿದೆ. ಭಾರತದ ಬೇರೆ ಯಾವ ರಾಜ್ಯದಲ್ಲೂ ನೀರಾವರಿ ವ್ಯವಸ್ಥೆ ಇಷ್ಟೊಂದು ವ್ಯಾಪಕವಾಗಿಲ್ಲ. ಇದರಲ್ಲಿ ಶೇ. 49 ಭಾಗಕ್ಕೆ ನಾಲೆಗಳಿಂದಲೂ ಉಳಿದ ನೆಲಕ್ಕೆ ಬಾವಿ, ಕೊಳವೆ ಬಾವಿ ಮತ್ತು ಪಂಪುಗಳಿಂದಲೂ ನೀರು ಒದಗುತ್ತದೆ. ಏಷ್ಯದಲ್ಲೇ ಅತ್ಯಂತ ದೊಡ್ಡ ವಿವಿಧೋದ್ದೇಶ ಯೋಜನೆಯಾದ ಭಾಕ್ರ-ನಂಗಲ್ ನಿಂದ ಪಂಜಾಬಿನ 5,50,000 ಹೆಕ್ಟೇರ್ ನೆಲಕ್ಕೆ ನೀರಾವರಿ ಸೌಲಭ್ಯ ಒದಗುತ್ತದೆ. ಇದಲ್ಲದೆ ಇಲ್ಲಿ ಇತರ ನೀರಾವರಿ ಹಾಗೂ ವಿವಿಧೋದ್ದೇಶ ಯೋಜನೆಗಳು ಕಾರ್ಯಗತವಾಗಿವೆ. ಇವುಗಳ ಪೈಕಿ ಬೀಯಾಸ್ ಸಟ್ಲೆಜ್- ಕೊಂಡಿ ಯೋಜನೆ ದೊಡ್ಡದು. ಸಿಂಧು ನದಿ ನೀರಿನ ಒಪ್ಪಂದದ ಪ್ರಕಾರ ಪಾಕಿಸ್ತಾನ ಬೀಯಾಸ್ ನದಿಯಲ್ಲಿ ಬಿಟ್ಟು ಕೊಂಡು ಹೆಚ್ಚಿನ ನೀರನ್ನು ಬಳಸುವ ತೆಯಿನ್ ಕಟ್ಟೆ ಇನ್ನೊಂದು ಯೋಜನೆ. ಸಟ್ಲೆಜ್ ನದಿಯ ಹರಿಕ ಅಡ್ಡಕಟ್ಟೆ, ಬೀಯಾಸ್ ನದಿಯ ಪೊಂಗ್ ಕಟ್ಟೆ ಇವೂ ಮುಖ್ಯವಾದವು. ಒಳ್ಳೆಯ ತಳಿಯ ಬೀಜಗಳ ಬಳಕೆ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಉಪಯೋಗ- ಇವುಗಳಿಂದ ಕೃಷಿಯ ಇಳುವರಿ ಹೆಚ್ಚಿದೆ.

ಕೈಗಾರಿಕೆ : ಪಂಜಾಬಿನಲ್ಲಿ ಖನಿಜ ನಿಕ್ಷೇಪಗಳು ಇಲ್ಲವೇ ಇಲ್ಲವೆನ್ನಬಹುದು. ಇಲ್ಲಿಯ ಕೈಗಾರಿಕಾಭಿವೃದ್ಧಿ ಕೃಷಿಯ ಆಧಾರದ ಮೇಲೆ ಆದ್ದು. ಇತರ ಅನುಭೋಗ ಕೈಗಾರಿಕೆಗಳೂ ಇವೆ. ಇಲ್ಲಿಯ 203 ಲಕ್ಷ ಘಟಕಗಳಲ್ಲಿ ಬೈಸಿಕಲ್ ಬಿಡಿ ಭಾಗಗಳು, ಹೊಲಿಗೆ ಯಂತ್ರ, ಕೈಗಾರಿಕೆಗಳಿಗೆ ಬೇಕಾದ ಉಪಕರಣಗಳು, ಆಟೋಗಳ ಉಪಕರಣಗಳು, ವಿದ್ಯುತ್ ಮತ್ತು ಕ್ರೀಡಾ ವಸ್ತುಗಳು, ಶಸ್ತ್ರ ಚಿಕಿತ್ಸಾ ಉಪಕರಣಗಳು, ಚರ್ಮದ ವಸ್ತುಗಳು, ಉಣ್ಣೆ ಮತ್ತು ಕಸೂತಿ ವಸ್ತ್ರಗಳು, ನಟ್ಟು ಬೋಲ್ಟುಗಳು, ಸಕ್ಕರೆ, ಖಾದ್ಯ ತೈಲ ಇತ್ಯಾದಿ ತಯಾರಿಕೆಯ, ಉತ್ಪಾದನೆಯ ಕರ್ಖಾನೆಗಳಿದ್ದು 9.26ಲಕ್ಷ ಮಂದಿಗೆ ಉದ್ಯೋಗ ನೀಡಿದೆ.2004, ಮಾರ್ಚ್ 31ರಲ್ಲಿದ್ದಂತೆ 645, ದೊಡ್ಡ ಮತ್ತು ಮಧ್ಯಮ ವರ್ಗದ ಕೈಗಾರಿಕಾ ಘಟಕಗಳಿದ್ದು 2.59ಲಕ್ಷ ಮಂದಿಗೆ ಉದ್ಯೋಗ ದೊರಕಿದೆ. ಇವುಗಳ ಜೊತೆಗೆ ಆಧುನಿಕ ಗಣಕಯಂತ್ರಗಳಿಗೆ ಸಂಬಂಧಿಸಿದ 

ಉದ್ಯೋಗಾವಕಾಶಗಳುಂಟಾಗಿವೆ. ಮುಖ್ಯ ಕೈಗಾರಿಕೆಗಳು ಹತ್ತಿ ಜವಳಿ, ಉಣ್ಣೆ, ರೇಷ್ಮೆ, ಸಕ್ಕರೆ, ಯಂತ್ರ ಸಲಕರಣೆ, ಕೃಷಿ ಉಪಕರಣ, ರಸಗೊಬ್ಬರ, ಬೈಸಿಕಲ್ಲು ಮತ್ತು ಅದರ ಬಿಡಿಭಾಗಗಳು, ಹೊಲಿಗೆಯಂತ್ರ, ಸಿಮೆಂಟ್, ಗೋಧಿಹಿಟ್ಟು ಮತ್ತು ಅಕ್ಕಿ ಗಿರಣಿಗಳು, ಮೋಟಾರ್ ವಾಹನದ ಬಿಡಿಭಾಗಗಳು, ಪ್ಲ್ಯಾಸ್ಟಿಕ್ ಕೊಳವೆ, ನಟ್ ಮತ್ತು ಬೋಲ್ಟ್‍ಗಳು, ಮರ ಕೈಗಾರಿಕೆ, ಹೈನುಗಾರಿಕೆ ಮತ್ತು ಕಸೂತಿ, ಸಣ್ಣ ಕೈಗಾರಿಕೆಗಳ ಕ್ಷೇತ್ರದಲ್ಲಿ ಪಂಜಾಬು ವಿಶೇಷವಾಗಿ ಮುಂದುವರಿದಿದೆ.

ಸಾರಿಗೆ : ಪಂಜಾಬ್ ರಾಜ್ಯದಲ್ಲಿ ರಸ್ತೆಗಳು ವಿಶೇಷವಾಗಿ ಅಭಿವೃದ್ಧಿ ಹೊಂದಿವೆ. ರಾಜ್ಯದ ವಿವಿಧ ಪ್ರದೇಶಗಳಿಗೆ ಒಳ್ಳೆಯ ಸಂಪರ್ಕ ಏರ್ಪಟ್ಟಿರುವುದು ವಾಣಿಜ್ಯದ ಬೆಳವಣಿಗೆಗೆ ಸಹಾಯಕಾರಿಯಾಗಿದೆ. 1968ರಲ್ಲಿ 9,240 ಕಿ.ಮೀ. ಉದ್ದದ ರಸ್ತೆಗಳಿದ್ದವು. ಇವುಗಳ ಪೈಕಿ 7,935 ಕಿ.ಮೀ. ರಸ್ತೆಗಳಿಗೆ ನೆಲಗಟ್ಟು ಹೊದಿಸಲಾಗಿದೆ. ಪ್ರಯಾಣಿಕರ ಸಾರಿಗೆಯನ್ನು ಸರ್ಕಾರ ಕ್ರಮ ಕ್ರಮವಾಗಿ ರಾಷ್ಟ್ರೀಕರಿಸುತ್ತಿದೆ. ದೂರ ಪ್ರಯಾಣಕ್ಕೆ ಸಾಮಾನ್ಯವಾಗಿ ರೈಲುಗಳು ಬಳಕೆಯಲ್ಲಿವೆ. ಚಂಡೀಗಢ, ಪಟಿಯಾಲಾ, ಭಾಟಿಂಡಾ, ಫಿರೋಜ್‍ಪುರ, ಲೂಧಿಯಾನ, ಜಲಂದರ್, ಅಮೃತಸರ, ಗುರುದಾಸ್‍ಪುರ ಮುಂತಾದ ಸ್ಥಳಗಳನ್ನು ಸಂಪರ್ಕಿಸುವ ರೈಲುಮಾರ್ಗಗಳಿವೆ. ದೆಹಲಿ ಮುಂತಾದ ನಗರಗಳಿಗೂ ಒಳ್ಳೆಯ ರೈಲ್ವೆ ಸಂಪರ್ಕವುಂಟು. ದೆಹಲಿಗೂ ಪಂಜಾಬಿನ ಪ್ರಮುಖ ನಗರಗಳಿಗೂ ನಡುವೆ ವಿಮಾನಗಳು ಸಂಚರಿಸುತ್ತವೆ.

ಶಿಕ್ಷಣ : ರಾಜ್ಯದಲ್ಲಿಯ ಸಾಕ್ಷರತೆ ದರ 33.67. ಇಡೀ ಭಾರತದ ಸಾಕ್ಷರತೆ ದರವಾದ 29.46ರೊಂದಿಗೆ ಹೋಲಿಸಿದರೆ ಇದು ಆಧಿಕ. ಪುರಷರಲ್ಲಿ ಸೇ. 40.38 ಮಂದಿ ಮತ್ತು ಸ್ತ್ರೀಯರಲ್ಲಿ ಶೇ. 25.98 ಮಂದಿ ಸಾಕ್ಷರರು. ಅಖಿಲ ಭಾರತಕ್ಕೆ ಈ ದರಗಳು ಅನುಕ್ರಮವಾಗಿ 39.45 ಮತ್ತು 18.72. ರಾಜ್ಯದಲ್ಲಿ 9,120 ಪ್ರಾಥಮಿಕ ಶಾಲೆಗಳೂ 1,213 ಮಾಧ್ಯಮಿಕ ಶಾಲೆಗಳೂ 1,495 ಪ್ರೌಢಶಾಲೆಗಳೂ 152 ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳೂ 38 ತಾಂತ್ರಿಕ ಮತ್ತು ವೃತ್ತೀಯ ಕಾಲೇಜುಗಳೂ, 17 ಪ್ರಶಿಕ್ಷಣ ಕಾಲೇಜುಗಳೂ ಇವೆ. ಇತರ ಶಿಕ್ಷಣ ಸಂಸ್ಥೆಗಳು 4. ವಿದ್ಯಾರ್ಥಿಗಳ ಸಂಖ್ಯೆ 1,09,550. ರಾಜ್ಯದಲ್ಲಿ ಒಟ್ಟು ನಾಲ್ಕು ವಿಶ್ವವಿದ್ಯಾಲಯಗಳಿವೆ. ಆವು ಗುರುನಾನಕ್ ವಿಶ್ವವಿದ್ಯಾಲಯ (ಅಮೃತಸರ), ಪಂಜಾಬ್ ವಿಶ್ವವಿದ್ಯಾಲಯ (ಚಂಡೀಗಢ), ಪಂಜಾಬ್ ಕೃಷಿ ವಿಶ್ವವಿದ್ಯಾಲಯ (ಲೂಧಿಯಾನ) ಮತ್ತು ಪಂಜಾಬಿ ವಿಶ್ವವಿದ್ಯಾಲಯ (ಪಟಿಯಾಲ). 

ಆಡಳಿತ : ಭಾರತದ ಇತರ ರಾಜ್ಯಗಳಂತೆ ಪಂಜಾಬಿನ ಸಂವೈಧಾನಿಕ ಆಡಳಿತ ಮುಖ್ಯರು ರಾಜ್ಯಪಾಲ. ಇವರನ್ನು ಕೇಂದ್ರಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ. ವಿಧಾನಸಭೆಗೆ ಹೊಣೆಯಾದ ಮಂತ್ರಿ ಮಂಡಲದ ಮೂಲಕ ಆಡಳಿತ ನಡೆಯುತ್ತದೆ. ವಿಧಾನ ಸಭೆಯ ಸದಸ್ಯತ್ವ 104. ಮಂತ್ರಿ ಮಂಡಲದ ನಾಯಕ ಮುಖ್ಯ ಮಂತ್ರಿ. ಆತ ಬಹುಮತ ಪಕ್ಷದ ನಾಯಕ.

ರಾಜ್ಯವನ್ನು ಹನ್ನೊಂದು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಅವುಗಳ ವಿವರಗಳನ್ನು ಮುಂದೆ ಕೊಟ್ಟಿದೆ.

ಜಿಲ್ಲೆ			  ವಿಸ್ತೀರ್ಣ (ಚ.ಕಿ.ಮೀ)		 ಜನಸಂಖ್ಯೆ
ಅಮೃತಸರ			5,075			30,74,207
ಗುರುದಾಸಪುರ			3,570			20,96,889
ಹೋಷಿಯಾಪುರ್			3,310			14,78,045
ಜಲಂಧರ್			2,658		    	19,53,508
ಲೂಧಿಯಾನಾ			3,744			30,30,352
ಭಾಟಿಂಡಾ			3,377		    	11,81,236
ಫಿರೋಜ್‍ಪುರ			5,865	       	17,44,753
ಪಟಿಯಾಲಾ			3,627		    	18,39,056
ಸಂಗ್ರೂರ್			5,021		   	19,98,464
ರೂಪ್‍ನಗರ್			2,117			1,11,000
ಕಪೂರ್ಥಲಾ			1,646		    	7,52,287
ಫರೀದ್‍ಕೋಟ್			1,472			5,52,466
ಫತೆಘರ್ ಸಾಹಿಬ್       		1,180	       	5,39,751
ಮಾನ್ಯ           		2,174	       	6,88,630
ಮೊಗ            		1,672	        	8,86,313
ಮುಕ್ತಸರ್			2,596        	7,76,702
ನವನ್‍ಷೆಹರ್			1,258	    		5,86,637		

	ಪಂಜಾಬ್ ಹರಿಯಾಣ ರಾಜ್ಯಗಳೆರಡಕ್ಕೂ ಸಾಮಾನ್ಯವಾದ ಉಚ್ಚ ನ್ಯಾಯಾಲಯವಿದೆ. ಜಿಲ್ಲೆಯ ಮಟ್ಟದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿದ್ದಾರೆ. ಇವರಿಗೆ ಸಹಾಯಕರಾಗಿ ಉಪ ನ್ಯಾಯಾಧೀಶರೂ ದಂಡಾಧೀಶರೂ ಇರುತ್ತಾರೆ. ಉಚ್ಚ ನ್ಯಾಯಾಲಯದಿಂದ ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಅಪೀಲು ಹೋಗಲು ಅವಕಾಶ ನೀಡಬಹುದು.
ಪ್ರವಾಸೋದ್ಯಮ : ಪಂಜಾಬಿನಲ್ಲಿ ಪ್ರವಾಸಿಗಳನ್ನು ಆಕರ್ಷಿಸುವ ಅನೇಕ ಐತಿಹಾಸಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಸ್ಥಳಗಳಿವೆ. ಸಿಂಧೂ ಕಣಿವೆ ನಾಗರಿಕತೆಯ ಅವಶೇಷಗಳಿರುವ ರೂಪಾರ್, ಸಿಖ್ ಧರ್ಮದ ಪವಿತ್ರ ಯಾತ್ರಾಸ್ಥಳವಾದ ಸ್ವರ್ಣದೇಗುಲ ಮತ್ತು ಸರೋವರಗಳ ನಗರವಾದ ಅಮೃತಸರ, ಪ್ರಾಚೀನ ಕೋಟೆ ಇರುವ ಭಾಟಿಂಡಾ, ಶಿಲ್ಪಕಲಾ ಕೃತಿಗಳ ಆಗರವಾದ ಕಪೂರ್ಥಲಾ, ಉದ್ಯಾನನಗರವೆಂದು ಹೆಸರಾದ ಪಟಿಯಾಲ, ರಾಜಧಾನಿ ಚಂಡೀಗಢ ಇವು ಪ್ರಮುಖ ಸ್ಥಳಗಳು.

	ಸಂಸ್ಕøತಿ : ರಾಜ್ಯದ ಸಾಂಸ್ಕøತಿಕ ಜೀವನ ಅಲ್ಲಿಯ ಜಾನಪದದಲ್ಲಿ, ಪ್ರೇಮ ಮತ್ತು ಯುದ್ಧಗಳ ಲಾವಣಿಗಳಲ್ಲಿ, ಜಾತ್ರೆ, ಹಬ್ಬಗಳಲ್ಲಿ, ನೃತ್ಯ ಸಾಹಿತ್ಯ ಸಂಗೀತಗಳಲ್ಲಿ ಅಭಿವ್ಯಕ್ತಗೊಂಡಿದೆ. ಹೀರಾ ರಾಂಝಾ, ಮಿರ್ಜಾ ಶಾಹಿಬಾನ್ ಮುಂತಾದ ಹಳೆಯ ರಮ್ಯ ಹಾಡುಕಥೆಗಳೂ ಜನಪ್ರಿಯವಾಗಿವೆ. ಅನೇಕ ಸೂಫಿ ಗೀತಗಳೂ ಪ್ರಸಿದ್ಧವಾಗಿವೆ. ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕ್ ಪ್ರಥಮತ ಪಂಜಾಬಿ ಭಾಷೆಯನ್ನು ಕಾವ್ಯಾಭಿವ್ಯಕ್ತಿ ಮಾಧ್ಯಮವಾಗಿ ಬಳಸಿದರು. ಇಪ್ಪತ್ತನೆಯ ಶತಮಾನದಲ್ಲಿ ಈ ಭಾಷೆ ವೈವಿಧ್ಯಮಯವಾಗಿ ಬೆಳೆದಿದೆ. ದಸರಾ, ದೀಪಾವಳಿ, ವೈಶಾಖಿ ಸಿಖ್ ಗುರುಗಳ ವಾರ್ಷಿಕ ಉತ್ಸವಗಳು- ಇವು ಸಾರ್ವತ್ರಿಕವಾಗಿ ಆಚರಣೆಯಲ್ಲಿವೆ. ಭಂಗಡಾ, ಝಮಾರ್, ಸಮ್ಮಿ ಇವು ಜನಪ್ರಿಯ ನೃತ್ಯ ಪ್ರಕಾರಗಳು. ಸಿಖ್ ಧಾರ್ಮಿಕ ಗೀತೆಗಳೂ ಮೊಗಲ್ ಮಾದರಿಯ ಅಭಿಜಾತ ಸಂಗೀತವೂ ಜನರನ್ನು ವಿಶೇಷವಾಗಿ ಆಕರ್ಷಿಸುತ್ತವೆ.							(ಕೆ.ಆರ್.)

	ಪಂಜಾಬಿನ ಇತಿಹಾಸ : ಸಿಂಧೂ ನದಿಗೆ ಸೇರುವ ಅದರ ಉಪನದಿಗಳಾದ ಝೀಲಮ್ (ವಿತ್ರಸ್ತ), ಚೀನಾಬ್ (ಅಶಿಕ್ನಿ), ರಾವಿ (ಪರುಷ್ನೀ), ಬೀಯಾಸ್ (ವಿಪಾಶ) ಮತ್ತು ಸಟ್ಲೆಜ್ (ಶತದ್ರು) ಎಂಬ ಐದು ನದಿಗಳ ಈ ಪ್ರದೇಶ ಎರಡು ವಿಭಿನ್ನ ಸಂಸ್ಕøತಿಗಳ ಆಗರವಾಗಿದ್ದರೂ ಇವುಗಳ ನಡುವೆ ಅತಿಶಯವಾಗಿ ಸಂಬಂಧಗಳಿವೆ. ಮಿಟ್ನೆ, ಖೈಬರ್, ಪೀವರ್ ಮತ್ತು ಬೊಲಾನ್ ಕಣಿವೆಗಳು ವಾಯವ್ಯದಲ್ಲಿ ಹಿಮಾಲಯದ ಆಚೆ ಇರುವ ದೇಶಗಳೊಡನ ಸಂಬಂಧವನ್ನು ಕಲ್ಪಸಿವೆ. ಶತಮಾನಗಳಿಂದಲೂ ಪಾಶ್ಚಾತ್ಯ ಜನರು ಸತತವಾಗಿ ಈ ಪ್ರದೇಶದ ಮೂಲಕ ಹಾದು ಭಾರತಕ್ಕೆ ಬಂದಿದ್ದಾರೆ. ಎಂತಲೇ ಇದು ಮಾನವಕುಲಗಳ ವಸ್ತುಸಂಗ್ರಹಾಲಯದಂತಾಗಿದೆ. ಐರೋಪ್ಯರು ಸಮುದ್ರಮಾರ್ಗವಾಗಿ ಭಾರತಕ್ಕೆ ಬರುವುದಕ್ಕೆ ಮೊದಲು ಇಲ್ಲಿಗೆ ಬಂದವರೆಲ್ಲ ಈ ಮಾರ್ಗವಾಗಿ ಬಂದವರೇ. ಅವರಲ್ಲಿ ಅನೇಕರು ದಂಡೆತ್ತಿ ಬಂದವರು. ಮೇಲಿಂದ ಮೇಲೆ ಪರಕೀಯರ ದಾಳಿಗೆ ತುತ್ತಾದ ಈ ಪ್ರದೇಶದ ಜನರು ಕ್ರಮೇಣ ಬಲಗೂಡಿಸಿಕೊಂಡರು. ಇಲ್ಲಿನ ಪ್ರಕೃತಿ ಸಹ ಇವರ ದೃಢಕಾಯಕ್ಕೆ ಸಹಾಯಕವಾಗಿತ್ತು. ಇವರು ಅನಂತರ ಒಟ್ಟುಗೂಡಿದರು. ಒಂದಾಗಿ, ಸಂಘ ಬಲ ಬೆಳೆಸಿಕೊಂಡು, ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಹೊರಗಡೆಯಿಂದ ಬಂದ ಭಿನ್ನ ಸಂಸ್ಕøತಿಗಳು ಇಲ್ಲಿ ಭಾರತೀಯ ಸಂಸ್ಕøತಿಯೊಡನೆ ಬೆರೆತವು. ಮೇಲಿಂದ ಮೇಲೆ ನಡೆದ ದಾಳಿಗಳು ಇಲ್ಲಿನ ಜನರಲ್ಲಿ ಏಕತೆಯನ್ನುಂಟುಮಾಡಿದುವು.

ಭಾರತದ ಅತಿ ಪ್ರಾಚೀನವೆನಿಸಿದ ಸಿಂಧೂ ಸಂಸ್ಕøತಿಯ ತೊಟ್ಟಿಲು ಈ ಪ್ರದೇಶ. ಇತಿಹಾಸ ಕಾಲದಲ್ಲಿ ಅಲೆಗ್ಸಾಂಡರನ ದಂಡಯಾತ್ರೆಗೂ ಮೊದಲು ಇದು ಪರ್ಷಿಯ ದೇಶದ ಅಕೆಮಿನಿಯನ್ ವಂಶಕ್ಕೆ ಸೇರಿದ ಮೊದಲನೆಯ ಡೇರಿಯಸನ ಅಧೀನಕ್ಕೊಳಪಟ್ಟಿತ್ತು. ಗಾಂಧಾರ ಇವನ ರಾಜ್ಯದ ಏಳನೆಯ ಪ್ರಾಂತ್ಯ (ಸತ್ರಪಿ) ಆಗಿತ್ತೆಂದೂ, ಸಿಂಧೂ ಕಣಿವೆ ಇವನ ಸಾಮ್ರಾಜ್ಯದ ಇಪ್ಪತ್ತನೆಯ ಪ್ರಾಂತ್ಯವಾಗಿತ್ತೆಂದೂ ಹಿರಾಡಟಸ್ (ಕ್ರಿ.ಪೂ. 5ನೆಯ ಶತಮಾನ) ಹೇಳಿದ್ದಾನೆ. ಹೀಗಿದ್ದುದು ಕ್ರಿ.ಪೂ.6ನೆಯ ಶತಮಾನದಲ್ಲಿ. ಡೆರಿಯಸನಿಗೂ ಮೊದಲು ಆಳಿದ ಸೈರಸ್ (559-530) ಗಾಂಧಾರದ ಪುಕ್ಕುಸಾತಿ ಎಂಬ ಅರಸನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದನೆಂದೂ ಅನಂತರ ಭಾರತದ ಈ ಭಾಗವನ್ನು ಆಕ್ರಮಿಸಲು ಯತ್ನಿಸಿದನೆಂದೂ ತಿಳಿದಿದೆ. ಡೇರಿಯಸನ ಕಾಲದಲ್ಲಿ ಪರ್ಷಿಯ ದೇಶದೊಡನೆ ಉಂಟಾದ ಬಾಂಧವ್ಯ ಅನಂತರ ಗ್ರೀಕ್ ದೇಶದ ಜನರೂ ಭಾರತಕ್ಕೆ ಕಾಲಿಡುವುದರಲ್ಲಿ ಪರಿಣಮಿಸಿತು.

ಕ್ರಿ.ಪೂ. 326ರಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ದಂಡೆತ್ತಿಬಂದಾಗ ಪಂಜಾಬಿನಲ್ಲಿ ಸಣ್ಣ ಸಣ್ಣ ರಾಜ್ಯಗಳಿದ್ದವು. ತಕ್ಷಶಿಲೆಯಲ್ಲಿದ್ದ ಅಂಭಿ ಮತ್ತು ಝೀಲಮ್-ಚೀನಾಬ್ ನಡುವಣ ರಾಜ್ಯದ ಪೊರಸ್ (ಪುರೂರವ) ಪ್ರಬಲರಾಗಿದ್ದರು. ಅಂಭಿ ಅಲೆಗ್ಸಾಂಡರನಿಗೆ ಶರಣಾಗಿ ಪುರೂರವನ ವಿರುದ್ಧದ ಕದನದಲ್ಲಿ ಶತ್ರುವಿಗೆ ನೆರವಾದ. ಪುರೂರವನ ಕೆಚ್ಚೆದೆಯಿಂದ ಹೋರಾಡಿದರೂ ಅಂತಿಮವಾಗಿ ಸೋಲಿಸಲ್ಪಟ್ಟ. ಅಲೆಗ್ಸಾಂಡರ್ ಆತನಿಗೆ ರಾಜ್ಯವನ್ನು ಹಿಂದಿರುಗಿಸಿದನಲ್ಲದೆ, ಹೆಚ್ಚಿನ ಪ್ರದೇಶವನ್ನೂ ಪುರೂರವನ ಆಳ್ವಿಕೆಗೆ ಒಳಪಡಿಸಿದ. ಪಂಜಾಬಿನ ಶಿಬಿ, ಮಾಳವ, ಕ್ಷುದ್ರಕ, ಅಗ್ರಶೇಣ್ಯ ಮುಂತಾದ ಇತರ ಜನಾಂಗಗಳವರು ಅಲೆಗ್ಸಾಂಡರನೊಡನೆ ಧೈರ್ಯದಿಂದ ಕಾದಿದರು. ತಮ್ಮ ತಮ್ಮ ಪ್ರದೇಶಗಳ ಸ್ವಾತಂತ್ರ್ಯಕ್ಕಾಗಿ ಮಿಗಿಲಾದ ಹೋರಾಟ ನಡೆಸಿದರು. 

ಅನಂತರದ ಸುಮಾರು ಒಂದು ಶತಮಾನ ಕಾಲ ಪಂಜಾಬ್ ಮೌರ್ಯ ಸಾಮ್ರಾಜ್ಯದ ಅಧೀನದಲ್ಲಿತ್ತು. ಅಲೆಗ್ಸಾಂಡರ್ ಪಂಜಾಬಿನಲ್ಲಿದ್ದಾಗ ಕಾಂದಾಹಾರದ ಜನದಂಗೆ ಎದ್ದು ಪ್ರಾಂತ್ಯಾಧಿಕಾರಿಯಾದ ನಿಕನೊರನನ್ನು ಕೊಂದರು. ಪಂಜಾಬಿನಿಂದ ಕಾಲ್ತೆಗೆದು ಹಿಂದಿರುಗುತ್ತಿದ್ದಾಗ ದಕ್ಷಿಣ ಪಂಜಾಬನ್ನೊಳಗೊಂಡಂತೆ ವಿಸ್ತಾರವಾದ ಪ್ರಾಂತ್ಯಕ್ಕೆ ಅಧಿಪತಿಯಾಗಿ ತನ್ನ ಪ್ರತಿನಿಧಿಯಾಗಿ ನಿಯಮಿಸಲ್ಪಟ್ಟ ಫಿಲಿಪ್ಪನನ್ನು ಸಹ ಜನರು ಕೊಂದರು. ರೋಷಗೊಂಡಿದ್ದ ಜನತೆ, ಸೈನ್ಯದಿಂದ ವಿಮೋಚನೆಗೊಳಿಸಲ್ಪಟ್ಟ ಸೈನಿಕ ಜನ, ಇದ್ದಕ್ಕಿದ್ದಂತೆ ಪ್ರಾಮುಖ್ಯಕ್ಕೆ ಬಂದ ಸಾಹಸಿಗಳು-ಪಂಜಾಬಿನ ಇಂಥವರನ್ನೆಲ್ಲ ಚಾಣಕ್ಯ ಚಂದ್ರಗುಪ್ತರು ಒಟ್ಟುಗೂಡಿಸಿದರು. ಈ ಜನರು ಚಂದ್ರಗುಪ್ತನ ವಿಶಿಷ್ಟ ಸೈನ್ಯವಾಗಿ ಸಮಾವೇಶಗೊಂಡರು. ಇವರ ನೆರವಿನಿಂದ ಪಾಟಲೀಪುತ್ರದವರೆಗೂ ನುಗ್ಗಿದ ಚಂದ್ರಗುಪ್ತ ಮೌರ್ಯಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ. ಅಲೆಗ್ಸಾಂಡರನ ದಂಡಯಾತ್ರೆಗೆ ಪಂಜಾಬಿನ ಜನರು ತೋರಿದ ಪ್ರತಿಕ್ರಿಯೆ ಇಂಥದು. ಅಶೋಕನ 14 ಬಂಡೆಗಲ್ಲು ಶಾಸನಗಳು ಹಿಂದಿನ ಪಂಜಾಬಿನ, ಈಗಿನ ಪಶ್ಚಿಮ ಪಾಕಿಸ್ತಾನದ ಪೆಷಾವರ್ ಮತ್ತು ಹಜಾರಾ ಜಿಲ್ಲೆಗಳಿಗೆ  ಸೇರಿದ ಷಾಹಬಾಜ್‍ಗರಿ ಮತ್ತು ಮಾನ್‍ಸೆಹ್ರಾಗಳಲ್ಲಿ ದೊರಕಿವೆ. ಆಫ್‍ಘಾನಿಸ್ಥಾನದ ಕಾಂದಾಹಾರ್ ಮತ್ತು ಜಲಾಲಾಬಾದ್‍ಗಳಲ್ಲಿ ಸಿಕ್ಕಿದ ಶಾಸನಗಳಿಂದ ಆತನ ರಾಜ್ಯ ಪಂಜಾಬನ್ನೂ ದಾಟಿ ವಾಯವ್ಯ ಗಡಿಪ್ರಾಂತಗಳನ್ನು ಕೂಡ ಒಳಗೊಂಡಿತ್ತೆಂಬುದು ಖಚಿತವಾಗುತ್ತದೆ. ಸಲ್ಯೂಕಸ್ ಚಂದ್ರಗುಪ್ತಮೌರ್ಯನಿಗೆ ಬಿಟ್ಟುಕೊಟ್ಟ ಪ್ರಾಂತ್ಯಗಳಲ್ಲಿ ಇವು ಸೇರಿವೆ.
ಮೌರ್ಯರ ಪತನಾನಂತರ ಪಂಜಾಬ್ ಪ್ರಾಂತ್ಯವೂ ಸ್ವಲ್ಪ ಕಾಲ ಯವನರ ಅಧೀನಕ್ಕೊಳಪಟ್ಟಿತು. ಮಧ್ಯಯುಗೀನ ಸಾಹಿತ್ಯದಲ್ಲಿ ಯವನ ಎಂಬ ಮಾತು ಸಾಮಾನ್ಯವಾಗಿ ಮ್ಲೇಚ್ಛ ಎಂಬುದರ ಪರ್ಯಾಯ ಪದವಾಗಿ ಬಳಸಲ್ಪಟ್ಟು ಎಲ್ಲ ಪರಕೀಯರಿಗೂ ಅನ್ವಯವಾಗಬಹುದಾಗಿತ್ತಾದರೂ, ಆರಂಭದ ಶತಮಾನಗಳಲ್ಲಿ ಇದು ಖಚಿತವಾಗಿ ಗ್ರೀಸ್ ದೇಶದ ಗ್ರೀಕರಿಗೆ, ಏಷ್ಯ ಮೈನರ್ನಲ್ಲಿ ಇಜಿಯನ್ ಸಮುದ್ರ ಮತ್ತು ಲಿಡಿಯಗಳ ನಡುವಣ ಗ್ರೀಕರಿಗೆ, ಅನ್ವಯವಾಗುತ್ತಿದ್ದ ಪದ. ಅಲೆಗ್ಸಾಂಡರ್ ಹೊಸದಾಗಿ ಹುಟ್ಟುಹಾಕಿದ ನಗರಗಳಲ್ಲಿ ಬ್ಯೂಸಿಫ¯ ಮತ್ತು ನೈಸೀಯಗಳು ಝೀಲಮ್ ನದಿತೀರದ ಮೇಲೂ ಅಲೆಗ್ಸಾಂಡ್ರಿಯ ಸಿಂಧೂ ಮತ್ತು ಚೀನಾಬ್ ನದಿಗಳ ಸಂಗಮದಲ್ಲೂ ಇದ್ದುವು. ಇಲ್ಲಿ ನೆಲಸಿದ ಗ್ರೀಕ್ ಜನರು ಭಾರತೀಯರೊಂದಿಗೆ ತೀರ ಹತ್ತಿರದ ಸಂಬಂಧಗಳನ್ನು ಹೊಂದಿದ್ದರು. ಎರಡೂ ಜನಾಂಗಗಳವರು ಪರಸ್ಪರ ಪ್ರಭಾವಕ್ಕೊಳಪಟ್ಟಿದ್ದರು. ಈ ಗ್ರೀಕ್ ಅರಸರಲ್ಲಿ ಡಿಮೀಟ್ರಿಯಸ್ ಪ್ರಮುಖ. ಈತ ಶಾಕಲವನ್ನು-ಈಗಿನ ಸಿಯಾಲ್ಕೋಟ್ ಪ್ರದೇಶವನ್ನು ವಶಪಡಿಸಿಕೊಂಡಿದ್ದ. ಶುಂಗವಂಶದ ಪುಷ್ಯಮಿತ್ರ ಕೆಲವು ವರ್ಷಗಳಾದರೂ ಪಂಜಾಬಿನ ಕೆಲವು ಭಾಗಗಳನ್ನು ತನ್ನ ಅಧೀನದಲ್ಲಿರಿಸಿಕೊಂಡಿದ್ದನಾದರೂ ಡಿಮೀಟ್ರಿಯಸ್ ಅವನ್ನು ಪುನಃ ಗೆದ್ದುಕೊಂಡಂತೆ ತೋರುತ್ತದೆ. ಇನ್ನೊಬ್ಬ ಪ್ರಮುಖ ಅರಸ ಮಿನಾಂಡರ್ (ಕ್ರಿ.ಪೂ. ಸು. 150). ಈತ ಇಂಡೋ-ಗ್ರೀಕ್. ಶಾಕಲ ಈತನ ರಾಜಧಾನಿಯಾಗಿದ್ದಂತೆ ತಿಳಿದುಬರುತ್ತದೆ. ಪೆಷಾವರ್ ಸುತ್ತಲಿನ ಪ್ರದೇಶವೆಲ್ಲ ಈತನ ಆಳ್ವಿಕೆಗೆ ಒಳಪಟ್ಟಿತ್ತೆಂಬುದು ಷಿನ್‍ಕೋಟ್‍ನಲ್ಲಿ ದೊರೆತ ಈತನ ಶಾಸನದಿಂದ ಸ್ಪಷ್ಟವಾಗುತ್ತದೆ. ಇಂಡೋ-ಗ್ರೀಕ್ ಅರಸ ಅಂಟೆಯಲ್ಸಿಡಸ್. ಈತನನ್ನು ಮಹಾರಾಜ ಅಂತಿಲಿಕಿತನೆಂದು ಬೆಸ್ನನಗರದ ಶಾಸನದಲ್ಲಿ ಕರೆದಿದೆ. ಈತನ ರಾಯಭಾರಿ ಹೀಲಿಯೊಡೋರಸನ ಊರು ತಕ್ಷಶಿಲೆ. ಇದು ಅಂತಿಲಿಕಿತನೆಂದು ನೆಲೆವೀಡೂ ಆಗಿತ್ತೆಂದು ಕಂಡುಬರುತ್ತದೆ.

ಕ್ರಿಸ್ತಶಕದ ಆರಂಭದಲ್ಲಿ ಇಂಡೋ-ಗ್ರೀಕರ ಬಲ ಕುಗ್ಗಿ ಶಕರು ಪ್ರಬಲರಾದರೂ ತಕ್ಷಶಿಲೆ, ಪುಷ್ಕಲಾವತಿ ಪ್ರದೇಶದಲ್ಲಿನ ಇವರನ್ನು ಕೆಳಗಿನ ಸಿಂಧೂಕಣಿವೆಯ ಶಕರ ದೊರೆ ಮೌಸ್ (ಕ್ರಿ.ಪೂ. ಸು. 20-ಕ್ರಿ.ಶ. 22) ಹೊರದೂಡಿದ. ಕ್ರಮೇಣ ಈ ಪ್ರದೇಶ ಕುಷಾಣರ ಕೈಸೇರಿತೆಂಬುದು ಪಂಜ್‍ತರ್ ಮತ್ತು ತಕ್ಷಶಿಲೆಯ ಶಾಸನಗಳಿಂದ ತಿಳಿದಿದೆ. ಕುಷಾಣರ ವಿಮ ಕಡ್‍ಫಿಸಿಸ್ ಪಂಜಾಬ್ ಪ್ರಾಂತ್ಯವನನ್ನು ಆಳುತ್ತಿದ್ದ. ಇದು ಚೀನೀ ಮೂಲಗಳಲ್ಲಿ ಕರೆಯಲಾದ ಟಿಯೆನ್‍ಟ್ಜೌ ಎಂಬ ಪ್ರದೇಶ. ಈತನ ಮಗ ಇಮ್ಮಡಿ ಕಡ್‍ಫೀಸಿಸ್ ಭಾರತೀಯ ಸಂಸ್ಕøತಿಯಿಂದ ಪ್ರಭಾವಿತನಾಗಿದ್ದ. ಈತನ ನಾಣ್ಯಗಳಲ್ಲಿ ಈತನನ್ನು ಸರ್ವಲೋಕ ಈಶ್ವರ ಮಹೀಶ್ವರನೆಂದು ವರ್ಣಿಸಿ ಈತನ ಹೆಸರನ್ನೂ ವಿಮ ಕಡ್‍ಫೀಸಿಸ್ನೆಂದು ಕೊಟ್ಟಿದೆ. ಕುಷಾಣರಲ್ಲಿ ಖ್ಯಾತಿವೆತ್ತವ ಕನಿಷ್ಕ. ಈತನ ರಾಜ್ಯ ಈಗಿನ ಉತ್ತರ ಪ್ರದೇಶ, ಪಂಜಾಬ್, ವಾಯವ್ಯ ಪ್ರಾಂತ್ಯಗಳು ಮತ್ತು ಸಿಂಧ್ ಪ್ರಾಂತ್ಯದ ಉತ್ತರಭಾಗಗಳನ್ನು ಒಳಗೊಂಡಿತ್ತು. ಕನಿಷ್ಕ ಪೆಷಾವರಿನಲ್ಲಿ ದೊಡ್ಡ ಬೌದ್ಧ ವಿಹಾರವನ್ನು ಕಟ್ಟಿಸಿದನೆಂದು ಹ್ಯೂಯೆನ್‍ತ್ಸಾಂಗ್ ಮತ್ತು ಅಲ್ಬೆರೂನಿಗಳ ಬರಹಗಳಿಂದ ತಿಳಿದಿದೆ. ನಾಗರ್‍ಕೋಡ್‍ನಲ್ಲಿ (ಈಗಿನ ಕೋಟ್‍ಕಾಂಗ್ರ) ಒಂದು ರೇಷ್ಮೆ ಬಟ್ಟೆಯ ಗ್ರಂಥದಲ್ಲಿ ಈ ಕುಷಾಣರ ವಂಶಾವಳಿಯನ್ನು ಬರೆದಿಟ್ಟಿರುವುದಾಗಿ ಸಹ ಆಲ್ಬರೊನಿ ತಿಳಿಸಿದ್ದಾನೆ. 

ಇಂಡೋ-ಗ್ರೀಕರ ಪ್ರಾಬಲ್ಯ ಕುಗ್ಗಿದಾಗ ಪಂಜಾಬಿನ ರೊಹ್‍ತಾಕ್ ಜಿಲ್ಲೆಯ ಸುತ್ತಲೂ ನೆಲಸಿದ್ದ ಯೌಧೇಯರು ಪ್ರಬಲರಾದರು. ಶಕ-ಕುಷಾಣರಿಗೆ ಇವರು ಅಡಿಯಾಳಾಗಬೇಕಾಗಿ ಬಂತಾದರೂ ಪುನಃ ಕ್ರಿ.ಶ. 2 ನೆಯ ಶತಮಾನದಲ್ಲಿ ಪ್ರಾಮುಖ್ಯ ಪಡೆದು ಕ್ಷತ್ರಪ ರುದ್ರದಾಮನನ್ನು ವಿರೋಧಿಸಿದರು. ಇವರು ಅನಂತರ ಗುಪ್ತರ ಅಧೀನಕ್ಕೊಳಪಡಬೇಕಾಯಿತು. ಮಹಾಭಾರತದಲ್ಲಿ ಆಯುಧಜೀವಿಗಳೆಂದು ಕರೆಯಲ್ಪಟ್ಟವರಲ್ಲಿ ಇವರೂ ಸೇರಿದ್ದಾರೆ. ಇವರ ನಾಣ್ಯಗಳು ಷಹರಾನ್‍ಪುರದಿಂದ ಮುಲ್ತಾನದವರೆಗಿನ ವಿಸ್ತಾರವಾದ ಪ್ರದೇಶದಲ್ಲಿ ಹಲವಾರು ಕಡೆ ದೊರಕಿವೆ. ಅಲ್ಲದೆ ನಾಣ್ಯದ ಅಚ್ಚುಗಳೂ ಜೇಡಿಮಣ್ಣಿನ ಮುದ್ರೆಗಳೂ ದೊರೆತಿವೆ. ಯೌಧೇಯರ ಮನದೇವತೆ ಬ್ರಹ್ಮಣ್ಯದೇವ (ಕಾರ್ತಿಕೇಯ). ಕ್ರಿ.ಶ. ಸುಮಾರು 4ನೆಯ ಶತಮಾನದ ಲೂಧಿಯಾನಾದಲ್ಲಿ ದೊರೆತ ದೊಡ್ಡ ಮುದ್ರೆಯೊಂದರಲ್ಲಿ ವೃಷಭನ ಚಿತ್ರವಿದ್ದು, ಕೆಳಗೆ, ಯೌಧೇಯಾಣಾಂ ಜಯಮಂತ್ರ ಧರಾಣಾಂ ಎಂಬ ಉಲ್ಲೇಖವಿದೆ. 

ಗುಪ್ತವಂಶದ ಅರಸರು ಪಂಜಬ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದರು. ಕುಷಾಣ ಸಂತತಿಗೆ ಸೀರಿದ ಕಿಡಾರ ಕ್ರಿ.ಶ. 4ನೆಯ ಶತಮಾನದ ಮೂರನೆಯ ಪಾದದಲ್ಲಿ ಪಂಜಾಬಿನಲ್ಲಿ ಆಳುತ್ತಿದ್ದ. ಕಿಡಾರ ಕುಷಾಣ ಷಾ ಎಂಬ ಬ್ರಾಹ್ಮಿಲಿಪಿಯ ಲೇಖವುಳ್ಳ, ಈತನ ಹಲವಾರು ನಾಣ್ಯಗಳು ದೊರೆತಿವೆ. ಸಸೇನಿಯಿನ್ ದೊರೆ ಇಮ್ಮಡಿ ಪಾಪುರನನ್ನು ಈತ ಸುಮಾರು 367-68ರಲ್ಲಿ ಸೋಲಿಸಿದ. ಸಮುದ್ರಗುಪ್ತನ ಅಲಹಾಬಾದ್ ಸ್ತಂಭ ಶಾಸನದಲ್ಲೂ ಉಕ್ತನಾದ ದೈವಪುತ್ರ ಷಾಹಿ ಷಾಹಾನುಷಾಹಿ ಎಂಬ ಕುಷಾಣ ದೊರೆ ಈ ಕಿಡಾರನಾಗಿರಬಹುದೆಂದು ಊಹಿಸಲಾಗಿದೆ. ಬಿಳಿಯ ಹೂಣರು 5ನೆಯ ಶತಮಾನದ ಮಧ್ಯಭಾಗದಲ್ಲಿ ಕಾಬೂಲ್ ಕಣಿವೆ ಮತ್ತು ಪಂಜಾಬ್‍ಗಳನ್ನು ಆಕ್ರಮಿಸುವವರೆಗೂ ಅನಂತರದ ಕುಷಾಣ ಸಂತತಿಯ ಹಲವರು ಇಲ್ಲಿ ಆಳುತ್ತಿದ್ದರು. ಬಿಳಿಯ ಹೂಣರು ಮೂಲತಃ ಚೀನ ದೇಶಕ್ಕೆ ಸೇರಿದವರು. ಯೂಚಿ ಪಂಗಡದೊಡನೆ ಉಂಟಾದ ಕಲಹಗಳ ಪರಿಣಾಮವಾಗಿ ಅವರು ವಲಸೆ ಹೋಗಬೇಕಾಗಿ ಬಂದು, ಆವರಲ್ಲಿ ಒಂದು ಗುಂಪು ಆಕ್ಸಸ್ ಕಣಿವೆಯ ಮೂಲಕ ಪರ್ಷಿಯ ಹಾಗೂ ಭಾರತ ದೇಶಗಳಿಗೆ ಬಂತು. ಈ ಗುಂಪಿನವರು ಗಾಂಧಾರವನ್ನು ಆಕ್ರಮಿಸಿದಾಗ ಗುಪ್ತರ ಸ್ಕಂದಗುಪ್ತ ಇವರನ್ನು ತಡೆದ (ಕ್ರಿ.ಶ. 460). ಆದರೆ ಮುಂದಿನ ಶತಮಾನದ ಆರಂಭದಲ್ಲಿ ಹೂಣರ ತೋರಮಾನ ಪಂಜಾಬಿನಿಂದ ಮಧ್ಯಪ್ರದೇಶದ ನೌಗಾರ್ ವರೆಗಿನ ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿದ. ಚಂದ್ರಭಾಗಾ (ಚೀನಾಬ್) ತೀರದ ವೈಯಾದಲ್ಲಿ ಈ ತೋರಮಾನ ವಾಸಿಸುತ್ತಿದ್ದು, 

ಜೈನಧರ್ಮಾವಲಂಬಿಯಾದನೆಂದು ಜೈನರ ಕುವಲಯಮಾಲಾ ಗ್ರಂಥದಲ್ಲಿ ಹೇಳಿದೆ. ಈತನ ಮಗ ಮಿಹಿರಕುಲ. ಈತನ ರಾಜಧಾನಿ ಸೌಕರ (ಸಿಯಾಲ್‍ಕೋಟ್).

ಅನಂತರದ ಶತಮಾನಗಳಲ್ಲಿ ಪಂಜಾಬಿನಲ್ಲಿ ಸಣ್ಣ ತುಂಡರಸರು ಆಳುತ್ತಿದ್ದರು. ಕೆಲವೊಮ್ಮೆ ಇದು ಅನ್ಯ ಅರಸರ ರಾಜ್ಯದ ಭಾಗವೂ ಆಗಿತ್ತು. 8ನೆ ಶತಮಾನದಲ್ಲಿ ಪ್ರತೀಹಾರ ವಂಶದ ಭೋಜ ಮತ್ತು ಮಹೇಂದ್ರಪಾಲರ ರಾಜ್ಯ ಪಂಜಾಬನ್ನೊಳಗೊಂಡಿತ್ತೆನ್ನಲು ಆಧಾರಗಳಿವೆ. ಬಂಗಾಲದ ಪಾಲಮನೆತನದ ಧರ್ಮಪಾಲನ ಆಳ್ವಿಕೆಯ ಕಾಲದಲ್ಲಿ ಪಂಜಾಬಿನಲ್ಲಿದ್ದ ಹಲವಾರು ಮಾಂಡಲಿಕರು ಆತನ ಸಾರ್ವಭೌಮತ್ವವನ್ನು ಅಂಗೀಕರಿಸಿದ್ದರು. ಅವರಲ್ಲಿ ಮಧ್ಯಪಂಜಾಬಿನ ಮುದ್ರರು, ಸಿಂಹಪುರದ ಯದುಗಳು (ಯಾದವ) ಪ್ರಮುಖರು. ತೋಮರ ಕುಲದವರು ಸಹ ಮಾಂಡಲಿಕರಾಗಿದ್ದು ಪ್ರತೀಹಾರ ಮಹೇಂದ್ರಪಾಲನಿಗೆ ಬೆಂಬಲವಾಗಿದ್ದರು. ಈ ತೋಮರರು ಈಗಿನ ದೆಹಲಿ (ಡಿಲ್ಲಿಕ) ನಗರದ ಸ್ಥಾಪಕರೆನ್ನಲಾಗಿದೆ. ಅದು ಅವರ ರಾಜಧಾನಿಯಾಗಿತ್ತು. ಕರ್ವಾಲ್ ಜಿಲ್ಲೆಯ ಪಹೋವಾದ (ಪ್ರಾಚಿನ ಪೃಥೂದಕ) ಶಾಸನದಲ್ಲಿ ಈ ಕುಲದ ಜಾಲಾಲ ಎಂಬ ಅರಸನ ಪ್ರಸ್ತಾಪವಿದೆ. ಈತನ ಸಂತತಿಗೆ ಸೇರಿದವನು ವಜ್ರಟ. 9ನೆಯ ಶತಮಾನದ ಮಧ್ಯಭಾಗದಲ್ಲಿ ದೆಹಲಿಯಲ್ಲಿ ಪ್ರಬಲನಾಗಿದ್ದ ಈತ ಪ್ರತೀಹಾರ ಭೋಜನ ಸಾರ್ವಭೌಮತ್ವವನ್ನು ಒಪ್ಪಿದ್ದ. ಈತನ ಮೊಮ್ಮಗ ಗೊಗ್ಗ 1ನೆಯ ಮಹೇಂದ್ರಪಾಲನ ಸಾಮಂತ. ಈತ ತನ್ನಿಬ್ಬರು ಸೋದರರೊಡಗೂಡಿ ಸರಸ್ವತೀ ತೀರದಲ್ಲಿ ನೂರು ವಿಷ್ಣು ಗೃಹಗಳನ್ನು ಕಟ್ಟಿಸಿದ. ಈ ತೋಮರರು ದೆಹಲಿಯಿಂದ ಈಗಿನ ಹರಿಯಾಣ ರಾಜ್ಯದ ಭಾಗಗಳನ್ನು 12ನೆಯ ಶತಮಾನದ ಮಧ್ಯಭಾಗದವರೆಗೂ ಆಳುತ್ತಿದ್ದರು. 
ಒಂಬತ್ತನೆಯ ಶತಮಾನದ ಮಧ್ಯಭಾಗದವರೆಗೂ ಸಿರ್ಪಾವರೆಗಿನ ಪೂರ್ವ ಪಂಜಾಬ್ ಪ್ರದೇಶ ಪ್ರತೀಹಾರರ ಅಧೀನದಲ್ಲಿತ್ತು. ಹತ್ತನೆಯ ಶತಮಾನದ ಆರಂಭದಲ್ಲಿ ಕಾಶ್ಮೀರದ ಅರಸನಾದ ಶಂಕರ ವರ್ಮಾ ಅದನ್ನು ಪ್ರತಿಹಾರ ಮಹೇಂದ್ರಪಾಲನಿಂದ ಕಸಿದು ಢಕ್ಕೆಯಾ ವಂಶಕ್ಕೆ ಸೇರಿದ ತನ್ನ ಅಧಿಕಾರಿಗಳಲ್ಲೊಬ್ಬನಿಗೆ ಬಿಟ್ಟುಕೊಟ್ಟ. ತ್ರಿಭಾಂಡಪುರದಿಂದ (ಈಗನ ಭಟಿಂಡ) ರಾಜಾ ಶತ್ರುಘ್ನದೇವನೆಂಬಾತ ಆ ಶತಮಾನದ ಉತ್ತರಾರ್ಧದಲ್ಲಿ ಆಳುತ್ತಿದ್ದ ರಾಜತರಂಗಿಣಿಯಲ್ಲಿ ಹೆಸರಿಸಲಾದ ಲಲ್ಲಿಯ ಎಂಬಾತ ಷಾಹಿ ಎಂಬ ಹೆಸರಿನ ಹಿಂದೂ ಮನೆತನದ ಮೊದಲ ಅರಸನಾಗಿ ಕಾಬುಲ್ ಕಣಿವೆಯಲ್ಲಿ 9ನೆಯ ಶತಮಾನದ ಉತ್ತರಾರ್ಧದಲ್ಲಿ ಆಳತೊಡಗಿದ. ಆದರೆ ಬಹುಬೇಗ ಕಾಬೂಲ್ ಅವನ ಕೈಯಿಂದ ಜಾರಿತು. ಆ ಬಳಿಕ ಆತ ಉದಯಭಾಂಡವನ್ನು (ರಾವಲ್ಪಿಂಡಿ ಜಿಲ್ಲೆಯ ಉಂಡ್) ರಾಜಧಾನಿಯಾಗಿ ಮಾಡಿಕೊಂಡ. ರಾಜತರಂಗಿಣಿಯಲ್ಲಿ ಆತನನ್ನು ವಿಶೇಷವಾಗಿ ಸ್ತುತಿಸಲಾಗಿದೆ. ಸಾಮಂತನೆಂಬಾತ ದಂಗೆ ಎದ್ದು ಲಲ್ಲಿಯನ ಮಗ ತೋರಮಾನನನ್ನು ಹೊರದೂಡಿದನಾದರೂ ಅವನನ್ನು ಕಾಶ್ಮೀರದ ಅರಸನಾದ ಪ್ರಭಾಕರ ಸೋಲಿಸಿ ರಾಜ್ಯವನ್ನು ತೋರಮಾನನಿಗೆ ಹಿಂದಿರುಗಿಸಿದ. ತೋರಮಾನನನ್ನು ಕಮವಾ ಎಂದು ಅಲ್ಬೆರೂನಿ ಕರೆದಿದ್ದಾನೆ. ಈತನ ವಂಶಕ್ಕೆ ಸೇರಿದಾತ 10ನೆಯ ಶತಮಾನದ ಅಂತಿಮ ಭಾಗದಲ್ಲಿ ಆಳಿದ ಜಯಪಾಲ. ಇವನು ವಿಸ್ತಾರವಾದ ಪಶ್ಚಿಮ ಪಂಜಾಬ್ ವಾಯವ್ಯ ಗಡಿ ಪ್ರಾಂತ್ಯ ಮತ್ತು ಪೂರ್ವ ಆಫ್‍ಘಾನಿಸ್ತಾನಗಳನ್ನೊಳಗೊಂಡ ರಾಜ್ಯವನ್ನಾಳಿದ. ಆದರೆ ಆ ವೇಳೆಗೆ ಘಜಿó್ನಯಲ್ಲಿ ಅಸ್ತಿತ್ವಕ್ಕೆ ಬಂದ ಸುಲ್ತಾನರು ಭಾರತದ ಮೇಲೆ ದಾಳಿ ಮಾಡಿದಾಗ ಜಯಪಾಲ ಅವರೊಡನೆ ನಿರಂತರವಾಗಿ ಹೋರಾಡಬೇಕಾಯಿತು. 

ಘಜಿó್ನಯಲ್ಲಿ ಅಸ್ತಿತ್ವಕ್ಕೆ ಬಂದ ಯಾಮಿನೀ ವಂಶದ ಮೂಲಪುರಷ ಸಬಕ್ತಗಿನ್ ಈತ ಚಿಕ್ಕವಯಸ್ಸಿನಲ್ಲಿಯೇ ಖುರಾಸಾನ್ ದೇಶದ ಅಲ್ಪ್ತಿಗೀನನ ಗುಲಾಮನಾಗಿದ್ದ. ಅಲ್ಪ್ತಿಗೀನ್ ಜಾಬುಲಿಸ್ತಾನವನ್ನು ಕಸಿದುಕೊಂಡು ಸುಲ್ತಾನನಾದಾಗ ಸಮಕ್ತಗೀನ್ ಆತನ ಸೇನಾನಿಯಾದ. ಅಲ್ಪ್ತಿಗೀನನ ಅನಂತರದ ಕೆಲವು ವರ್ಷಗಳಲ್ಲಿ ಆ ರಾಜ್ಯ ಪೀರಾಇಯಾ ಎಂಬ ಗುಲಾಮನ ವಶವಾಯಿತು. ಕ್ರೂರಿಯಾಗಿದ್ದ ಆತನ ವಿರುದ್ಧ ಕಳುಹಿಸಲಾದ ಸೈನ್ಯಗಳಲ್ಲಿ ಷಾಹೀ ಮನೆತನದ ಜಯಪಾಲನದೂ ಇತ್ತು. ಆದರೆ ಈ ಸೈನ್ಯ ಸೋತಿತು. ಪೀರಾಇಯಾನ ದುರ್ನಡತೆಯಿಂದಾಗಿ ಆತ ಅಧಿಕಾರ ಕಳೆದುಕೊಂಡ. ಆಗ ಸಬಕ್ತಗೀನ್ ಅರಸನಾದ (977). ಈತ ಉದಭಾಂಡದ ಷಾಹಿ ಜಯಪಾಲನ ವಿರುದ್ಧವಾಗಿ ಮೇಲಿಂದ ಮೇಲೆ ದಂಡೆತ್ತಿದ. ಮೊದಲೊಮ್ಮೆ ನಡೆದ ಕದನದಲ್ಲಿ ಲಂಘಾನ್ ನಗರ ಶತ್ರುವಶವಾಯಿತು. ಇದನ್ನು ಪುನಃ ವಶಪಡಿಸಿಕೊಳ್ಳಲು ಜಯಪಾಲ ಇತರ ಹಿಂದೂ ಅರಸರ ನೆರವು ಬೇಡಿದನೆಂಬುದು ಫಿರಿಸ್ತಾಸಿ ಹೇಳಿಕೆ. ಇದರ ಸತ್ಯಾಸತ್ಯತೆ ಸ್ಪಷ್ಟವಾಗಿಲ್ಲ. ಈ ಬಾರಿ ಜಯಪಾಲ ಪೆಷಾವರ್‍ವರೆಗಿನ ಪ್ರದೇಶವನ್ನೆಲ್ಲ ಕಳೆದುಕೊಂಡ. ಸಬಕ್ತಗಿನನ ಮಗ ಘಜಿó್ನ ಮಹಮೂದ್. 998ರಲ್ಲಿ ಪಟ್ಟಕ್ಕೆ ಬಂದ ಈತ ಮುಂದಿನ ಎರಡು ವರ್ಷಗಳಲ್ಲಿ ಪೆಷಾವರಿಗೆ ಸಮೀಪದ ಕೆಲವು ಕೋಟೆಗಳನ್ನು ತನ್ನ ಮೊದಲ ದಂಡಯಾತ್ರೆಯಲ್ಲಿ ಗೆದ್ದುಕೊಂಡ. 1001ರಲ್ಲಿ ಮತ್ತೊಮ್ಮೆ ಜಯಪಾಲ ಈತನನ್ನು 1,200 ಕುದುರೆಗಳು, 3,000 ಕಾಲಾಳುಗಳು, ಮತ್ತು 300 ಆನೆಗಳಿಂದ ಕೂಡಿದ ಶಕ್ತವಾದ ಸೈನ್ಯದೊಡನೆ ಪೆಷಾವರ್ ನಗರದ ಹೊರವಲಯದಲ್ಲಿ ಎದುರಿಸಿದ ; ಆದರೆ ಸೋತು ಸೆರೆಯಾದ ; 25,000 ದಿನಾರಗಳನ್ನು ಕೊಡುವ ಆಶ್ವಾಸನೆಯೊಂದಿಗೆ ಮುಕ್ತನಾದ. ಈತನ ಇಚ್ಛೆಗೆ ವಿರುದ್ಧವಾಗಿ ಈತನ ಮಗ ಆನಂದಪಾಲ ಆ ಹಣ ಕೊಟ್ಟ. ಮೂರು ಬಾರಿ ಮೇಲಿಂದ ಮೇಲೆ ಸೋಲನ್ನನುಭವಿಸಿದ ಜಯಪಾಲ ಆತ್ಮಹತ್ಯೆ ಮಾಡಿಕೊಂಡ.

	ಜಯಪಾಲನ ಮಗ ಆನಂದಪಾಲ 1001 ರಲ್ಲಿ ಪಟ್ಟಕ್ಕೆ ಬಂದ. 1004 ರಲ್ಲಿ ಮಹಮೂದ್ ಭಾರತದ ಮೇಲಿನ ದಾಳಿಗಳನ್ನು ಮುಂದುವರಿಸಿದ. ಮುಲ್ತಾನಿಗೆ ಸಮೀಪದಲ್ಲಿ ಸಿಂಧೂ ನದಿಯನ್ನು ದಾಟಿ ಭಾಟಿಯವನ್ನು ತಲುಪಿದ. ಇಲ್ಲಿ ಆನಂದಪಾಲನ ಸಾಮಂತನಾದ ಬಾಜಿರಾಯ ಇವನನ್ನು ತಡೆದ. ಆದರೆ ಆತನ ಎಲ್ಲ ಯತ್ನಗಳೂ ವಿಫಲವಾಗಿ ಭಾಟಿಯ ಮಹಮೂದನ ವಶವಾಯಿತು. ಮಹಮೂದ ಅಪಾರವಾದ ಸಂಪತ್ತನ್ನು ದೋಚಿದ. ಆದರೆ ಈತ ಹಿಂದಿರುಗುತ್ತಿದ್ದಾಗ ಪಂಜಾಬಿನ ನದಿಗಳಲ್ಲಿ ಏರಿದ್ದ ಪ್ರವಾಹದಲ್ಲಿ ಅದರ ಬಹುಭಾಗ ಕೊಚ್ಚಿಹೋಯಿತು. 1005-06 ಹಾಗೂ 1008 ರಲ್ಲಿ ಇನ್ನೂ ಎರಡು ಬಾರಿ ಆನಂದಪಾಲ ಮಹಮೂದನನ್ನು ಎದುರಿಸಿ ತೀವ್ರವಾಗಿ ಹೋರಾಡಿದನಾದರೂ ಮಹಮೂದನ ಬಲದ ಮುಂದೆ ಆನಂದಪಾಲನ ಉತ್ಸಾಹ ಕುಗ್ಗಿತು. ಮೊದಲಬಾರಿ ಪೆಷಾವರ್ ಸಮೀಪದಲ್ಲಿ, ಆನಂತರ ನಾಗರಕೋಟ್‍ನಲ್ಲಿ ಕದನಗಳಾದವು. ವಿಜಯಶಾಲಿಯಾದ ಸುಲ್ತಾನ ಮೊದಲ ಬಾರಿ ಮುಲ್ತಾನನ್ನೂ ಅನಂತರ ನಾಗರಕೋಟವನ್ನೂ ಆಕ್ರಮಿಸಿ ಸಂಪ್ತನ್ನು ಕೊಳ್ಳೆಹೊಡೆದ. ಈ ಎಲ್ಲ ಸೋಲುಗಳಿಂದ ಧೃತಿಗೆಟ್ಟ ಆನಂದಪಾಲ ಮಹಮೂದನ ಮೈತ್ರಿ ಬೆಳಸಬೇಕಾಯಿತು. ಇದರ ಪರಿಣಾಮವಾಗಿ ಇವರ ನಡುವಣ ವ್ಯವಹಾರಗಳು ಉತ್ತಮಗೊಂಡುವು. ಆದರೆ ಮಹಮೂದನ ಭಾರತದ ಮೇಲೆ ಮಾಡಿದ ದಾಳಿಗಳಲ್ಲಿ ಆನಂದಪಾಲ ಬಲವಂತವಾಗಿ ಅನಂತರ ಪಾಲುಗೊಳ್ಳಬೇಕಾಯಿತು.

	ಆನಂದಪಾಲನ ಮಗ ತ್ರಿಲೋಚನಪಾಲ ಮಹಮೂದನನ್ನು ಎದುರಿಸಿದ (1013). ಆ ವೇಳೆಗೆ ಈತ ರಾಜಧಾನಿಯನ್ನು ನಂದನಕ್ಕೆ ಬದಲಾಯಿಸಿದ್ದ. ಅನೇಕ ದಿನಗಳ ಕಾಲ ನಡೆದ ತೀವ್ರ ಹೋರಾಟದಲ್ಲಿ ಅಂತಿಮವಾಗಿ ಮಹಮೂದ ಗೆದ್ದ. ಷಾಹಿ ರಾಜ್ಯದ ಪಶ್ಚಿಮ ಹಾಗೂ ಮಧ್ಯ ಭಾಗಗಳು ಘಜಿó್ನಯ ವಶವಾದುವು. ಪೂರ್ವ ಭಾಗವನ್ನು ಮಾತ್ರ ತ್ರಿಲೋಚನಪಾಲ ಸರ್‍ಹಿಂದ್‍ನಿಂದ ಆಳುತ್ತಿದ್ದ. ಅನಂತರ ಸುಮಾರು ಐದು ವರ್ಷಗಳಕಾಲ ಮಹಮೂದನ ಕಾಟವಿಲ್ಲದಿದ್ದರೂ ಪೂರ್ವ ರಾಜ್ಯದ ಅರಸನಾದ ಚಾಂದ್‍ರಾಯ್ ಇವನ ಪ್ರತಿಸ್ಪರ್ಧಿಯಾದ. ಇವರ ನಡುವೆ ಆಗಿಂದಾಗ್ಗೆ ಕದನಗಳು ನಡೆಯುತ್ತಿದ್ದುವು. 1018 ರಲ್ಲಿ ಮಹಮೂದ ಇನ್ನೊಮ್ಮೆ ತ್ರಿಲೋಚನಪಾಲನ ವಿರುದ್ಧ ಏರಿಬಂದಾಗ ಇವನು ರಾಜ್ಯವನ್ನು ತೊರೆದು ಮಾಳವದೇಶದ ಪರಮಾರ ಭೋಜನ ಆಶ್ರಯ ಪಡೆದ. ಆದರೆ ಮಹಮೂದ ಬುಂದೇಲವಂಶದ ವಿದ್ಯಾಧರನೊಡನೆ ಕಾಳಗಕ್ಕೆ ಬಂದಾಗ (1020-21) ತ್ರಿಲೋಚನಪಾಲ ವಿದ್ಯಾಧರನ ನೆರವಿಗೆ ಬಂದ. ಬಹುಶಃ ಯಮುನಾ ತೀರದ ಮೇಲೆ ನಡೆದ ಯುದ್ಧದಲ್ಲಿ ಇವನು ಅಂತಿಮವಾಗಿ ಸೋತ; ಹಿಂಜರಿಯುತ್ತಿದ್ದಾಗ ಕೊಲ್ಲಲ್ಪಟ್ಟ. ಇದರ ಪರಿಣಾಮವಾಗಿ ಷಾಹೀ ರಾಜ್ಯ ಸಂಪೂರ್ಣವಾಗಿ ಮಹಮೂದನ ವಶವಾಯಿತು.

	ಮಹಮೂದನ ಮರಣದ ಅನಂತರ ಅವನ ರಾಜ್ಯಕ್ಕಾಗಿ ಅವನ ಮಕ್ಕಳಲ್ಲಿ ಕಲಹಗಳಾದುವು. ಪಂಜಾಬಿನಲ್ಲಿ ಅರಿಯಾರಿಖ್ ಎಂಬವನನ್ನು ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ಮಹಮೂದ ನೇಮಿಸಿದ್ದ. ಇವನು ದಬ್ಬಾಳಿಕೆ ನಡೆಸುತ್ತಿದ್ದನೆಂದು ಸುಲ್ತಾನನ ಮಗ ಮಾಸೂದ್ ಇವನನ್ನು ಹಿಂದಕ್ಕೆ ಕರೆಸಿಕೊಂಡ. ಇವನ ಸ್ಥಾನದಲ್ಲಿ ಅಹ್ಮದ್ ನಿಯಾಲ್ತಿಗೀನ್ ನೇಮಕವಾದ. ಈತ ಕಂದಾಯದ ಅಧಿಕಾರಿಯೊಂದಿಗೆ (ಷಿಯಾಜೀ ಖಾಜಿ) ಹೊಂದಿಕೊಂಡು ಹೋಗಲಿಲ್ಲ. ಮಾಸುದ್ ಆ ಅಧಿಕಾರಿಯ ಕರ್ತವ್ಯಗಳನ್ನು ಮೊಟಕುಗೊಳಿಸಿದ. ಅದರ ದುರುಪಯೋಗ ಪಡೆದ ನಿಯಾಲ್ತಿಗೀನ್ ಅಲ್ಲಿಯ ಠಾಕೂರರಿಂದ ವಿಶೇಷವಾದ ಕಾಣಿಕೆಗಳನ್ನು ವಸೂಲು ಮಾಡಿದ. ವಾರಾಣಾಸಿಯವರೆಗೂ ಹಠಾತ್ತನೆ ದಾಳಿ ಮಡಿ, ಅಲ್ಲಿಯ ಅಂಗಡಿಬೀದಿಯನ್ನು ಕೊಳ್ಳೆಹೊಡೆದು, ಅಪಾರ ದ್ರವ್ಯದೊಂದಿಗೆ ಹಿಂದಿರುಗಿದ. ಇವನ ಇಂಥ ಕೃತ್ಯಗಳಿಂದ ಬೇಸತ್ತ ಸುಲ್ತಾನ ಇವನನ್ನು ದಂಡಿಸಲು ತಿಲಕ್ ಎಂಬ ಹಿಂದುವನ್ನು ಕಳುಹಿಸಿದ. ನಿಯಾಲ್ತಿಗೀನ್ ಓಡಿಹೋದ. ಜಾಟರು ಇವನನ್ನು ಕೊಂದರು. ಅನಂತರ ಮಾಸೂದನ ಒಬ್ಬ ಮಗ ಮಜ್óದೂದ್ ಪ್ರಾಂತ್ಯಾಧಿಕಾರಿಯಾದ (1036). ಈ ಪ್ರಾಂತ್ಯವನ್ನುವಿಸ್ತರಿಸಲು ಮೂರು ವರ್ಷಗಳ ಕಾಲ ಮಾಸೂದ್ ಯತ್ನಿಸಿ ಸ್ವಲ್ಪಮಟ್ಟಿಗೆ ಯಶಸ್ವಿಯಾದ. ಆದರೆ ಸಲ್ಜುಕರು ಘಜಿó್ನಯ ಮೇಲೆ ಒತ್ತಡ ಹೇರ ತೊಡಗಿದಾಗ ಮಾಸೂದ್ ಘಜಿó್ನಯನ್ನೇ ಬಿಡಬೇಕಾಯಿತು. ಹಾದಿಯಲ್ಲಿ ಈತನ ತುರ್ಕ ಮತ್ತು ಹಿಂದೂ ಗುಲಾಮರು ದಂಗೆಯೆದ್ದು ಇವನನ್ನು ಕೊಂದು ಇವನ ಕುರುಡ ಸೋದರ ಮಹಮ್ಮದನನ್ನು ಸುಲ್ತಾನ್ ಪದವಿಗೆ ಏರಿಸಿದರು. 

	ಬಾಲ್ಖನಲ್ಲಿದ್ದ ಮಾಸೂದನ ಮಗ ಮೌದೂದ್ ಇದನ್ನು ಕೇಳೀ ಘಜಿó್ನಗೆ ಬಂದು ಅಲ್ಲಿಂದ ಚಿಕ್ಕಪ್ಪನ ಬೆನ್ನಟ್ಟಿ ಸಿಂಧೂ ಮತ್ತು ಘಜಿó್ನಗಳ ನಡುವೆ ಸಂಗ್ರಹಾರ್‍ನಲ್ಲಿ ಅವರನ್ನು ಎದುರಿಸಿ ಸೋಲಿಸಿ ಕೊಂದ. ಪೆಷಾವರ್ ಮುಲ್ತಾನ್‍ಗಳ ಪ್ರಾಂತ್ಯಾಧಿಕಾರಿಯಾಗಿ ನಿಯಮಿಸಲ್ಪಟ್ಟಿದ್ದ ಮಹಮ್ಮದನ ಮಗ ನಾಮಿಯೂ ಕೊಲೆಗೆ ಈಡಾದ. ಆದರೆ ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿದ್ದ ಮಜ್óದೂದ್ ಅಣ್ಣನಿಗೆ ಸಾಮಂತನಾಗಿರಲೊಪ್ಪಲಿಲ್ಲ. ಫಲವಾಗಿ ಅವನೂ ಪ್ರಾಣ ಕಳೆದುಕೊಂಡ. ಮೌದೂದ್ ಪಂಜಾಬನ್ನು ಆಕ್ರಮಿಸಿದ. 1043ರಲ್ಲಿ ಪಂಜಾಬಿನಿಂದ ಮಹಮದೀಯರನ್ನು ಹೊರದೂಡುವ ಉದ್ದೇಶದಿಂದ ದೆಹಲಿಯ ರಾಜನ ನೇತೃತ್ವದಲ್ಲಿ ಹಲವು ಅರಸರು ಒಟ್ಟುಗೂಡಿ ದಂಡೆತ್ತಿ ಬಂದರು. ಇವರು ಹನ್‍ಸಿ, ಥಾನೇಶ್ವರ, ನಾಗರಕೋಟ್‍ಗಳನ್ನು ಆಕ್ರಮಿಸಿ ಲಾಹೋರನ್ನು ಮುತ್ತಿದರಾದರೂ ಹಠಾತ್ತಾಗಿ ಮೇಲೆ ಬಿದ್ದ ಶತ್ರುಸೈನ್ಯದಿಂದ ಪರಾಜಿತರಾಗಿ ಹಿಮ್ಮೆಟ್ಟಿದರು. ಕೆಲವು ವರ್ಷಗಳ ಕಾಲ ನಾಗರಕೋಟ್ ಹಿಂದುಗಳ ವಶದಲ್ಲಿ ಉಳಿದಿತ್ತು. ಘಜಿó್ನಯಲ್ಲಿ ಮೇಲಿಂದ ಮೇಲೆ ಅಧಿಕಾರಕ್ಕಾಗಿ ಜಗಳಗಳಾಗುತ್ತಿದ್ದವು. ಅವುಗಳ ಪರಿಣಾಮವಾಗಿ ಪಂಜಾಬಿನ ಪ್ರಾಂತ್ಯಾಧಿಕಾರಿಗಳು ಬದಲಾಗುತ್ತಿದ್ದರು. ಅಂತಿಮವಾಗಿ ಘೋರಿ ಮನೆತನದ ಮುಇಜುóದ್ದೀನ್ ಮಹಮ್ಮದ್ ಯಾಮಿನೀ ಅರಸರ ಆಳ್ವಿಕೆಗೆ ಚರಮಗೀತೆ ಹಾಡಿದ. 

	1186 ರಲ್ಲಿ ಷಿಹಾಬುದ್ದೀನ್ ಘೋರಿ ಪಂಜಾಬನ್ನು ವಶಪಡಿಸಿಕೊಂಡ ಅನಂತರ ಅದು ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡಿತು. 1206 ರಿಂದ ದೆಹಲಿಯ ಸುಲ್ತಾನರ ಆಳ್ವಿಕೆಗೆ ಒಳಪಟ್ಟ ಈ ಪ್ರದೇಶ ಕ್ರಮೇಣ; ಮೊಗಲ್ ಸಾಮ್ರಾಜ್ಯದ ಭಾಗವಾಯಿತು. ಸಯ್ಯಿದ್ ಮನೆತನದ ಮುಬಾರಕ್ಕೆ ಷಹನ (1421-34) ಆಳ್ವಿಕೆಯ ಕಾಲದಲ್ಲಿ ಬಹಳ ಕಾಲದಿಂದಲೂ ಝೀಲಮ್ ಚೀನಾಬ್ ಕಣಿವೆಗಳಲ್ಲಿ ನೆಲಸಿದ್ದ ಖೈಬರ್ ಜನರ ನಾಯಕ ಇಸರತ್ ಸಯ್ಯೀದರನ್ನು ಹೊರದೂಡಲು ಬಹಳ ಶ್ರಮಿಸಿದ. ಜಲಂಧರ್ ಮತ್ತು ಸರ್‍ಹಿಂದ್‍ವರೆಗೂ ಮುನ್ನುಗಿದ ಈತನನ್ನು ಇಸ್ಲಾಮ್ ಖಾನ್ ಲೋದಿ ತಡೆದ (1422). ಮತ್ತೆ ಇವನು ಲಾಹೋರನ್ನು ಎರಡು ಬಾರಿ ಮುತ್ತಿದ್ದನಾದರೂ ಅದರಿಂದ ಪ್ರಯೋಜನವಾಗಲಿಲ್ಲ. ಆರು ವರ್ಷಗಳ ಬಳಿಕ, 1428 ರಿಂದ ಮೂರು ನಾಲ್ಕು ಭಾರಿ, ಇವನು ದೆಹಲಿಯನ್ನು ಆಕ್ರಮಿಸಲು ಯತ್ನಿಸಿದ. ಆದರೆ ಪ್ರತಿಬಾರಿಯೂ ವಿಫಲನಾದ. 1442ರಲ್ಲಿ ಇವನ ರಾಣಿಯೇ ಈತನನ್ನು ಕೊಲ್ಲಿಸಿದಳು.

	1524ರಲ್ಲಿ ಬಾಬರ್ ಭಾರತದ ಮೇಲೆ ಆರನೆಯ ಬಾರಿ ದಂಡೆತ್ತಿ ಬಂದು ಝೀಲಮ್ ಚೀನಾಬ್ ನದಿಗಳನ್ನು ದಾಟಿ ಲಾಹೋರಿನ ಸಮೀಪಕ್ಕೆ ಬಂದಾಗ ಅಲ್ಲಿ ಲೋದಿ ಸುಲ್ತಾನನ ಸೈನ್ಯ ಎದುರಾಯಿತು. ಅವನು ಅದನ್ನು ಸೋಲಿಸಿ ಅಲ್ಲಿಂದ ದೀಪಾಲ್ಪುರಕ್ಕೆ ಸಾಗಿದ. ದೌಲತ್‍ಖಾನನಿಗೆ ಜಲಂಧರ್ ಮತ್ತು ಸುಲ್ತಾನ್ಪುರಗಳ ಅಧಿಕಾರ ವಹಿಸಿಕೊಟ್ಟ. ಆದರೆ ದೌಲತ್ಖಾನ್ ತೃಪ್ತನಾಗಲಿಲ್ಲ. ಬಾಬರ್ ಹಿಂದಿರುಗಿದ ಮೇಲೆ ಇಲ್ಲಿ ಗೊಂದಲಗಳಾದುವು. 1525ರಲ್ಲಿ ಪುನಃ ದಂಡೆತ್ತಿ ಬಂದ ಬಾಬರ್ ಲಾಹೋರ್ ಹಾಗೂ ಅದರ ಅಧೀನ ಪ್ರದೇಶಗಳನ್ನು ವಶಪಡಿಸಿಕೊಂಡ. ಅಲ್ಲಿಂದ ದೆಹಲಿಯ ಕಡೆಗೆ ಸರ್‍ಹಿಂದ್ ಅಂಬಾಲಾಗಳ ಮೂಲಕ ಪ್ರಯಾಣ ಮಾಡಿದ. ಪಾಣಿಪತ್ ಕದನದ ಫಲವಾಗಿ ಮೊಗಲ್ ಸಾಮ್ರಾಜ್ಯದ ಸ್ಥಾಪನೆಯಾಯಿತು. 1540ರಲ್ಲಿ ಷೇರ್‍ಖಾನ್ನಿಂದ ಪರಾಜಯಹೊಂದಿದ ಹುಮಾಯೂನ ಸರ್‍ಹಿಂದ್ ಮೂಲಕ ಲಾಹೋರಿಗೆ ಸಾಗಿ ಅಲ್ಲಿ ಸೋದರ ಕಾಮ್ರಾನನೊಡನೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿದ. ಆದರೆ ಇದು ಸಾಧ್ಯವಾಗಲಿಲ್ಲ. ಹುಮಾಯೂನ್ ಪಂಜಾಬಿನಿಂದ ಕಾಲ್ತೆಗೆಯಬೇಕಾಯಿತು. 1554-55ರಲ್ಲಿ ಹುಮಾಯೂನ್ ಹಿಂದಿರುಗಿದಾಗ, ಬೈರಾಮಖಾನನ ಹೋರಾಟದ ಫಲವಾಗಿ ದಿಪಾಲ್ಪುರ, ಹರಿಯಾಣ, ಜಲಂಧರ್, ಸರ್‍ಹಿಂದ್‍ಗಳು ಒಂದೊಂದಾಗಿ ಹುಮಾಯೂನನ ವಶವಾದುವು. ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ಮೊದಲು ಅಬ್ದುಲ್ ಮಾಲಿಯೂ ಅನಂತರ ಬೈರಾಮ್‍ಖಾನನ ರಕ್ಷಣೆಯಲ್ಲಿದ್ದ ಅಕ್ಬರನೂ ನೇಮಿತರಾದರು. ಆದರೆ ಕೆಲವೇ ತಿಂಗಳುಗಳಲ್ಲಿ ಹುಮಾಯೂನ್ ಮೃತನಾದ.

	ಸಿಖ್ ಧರ್ಮ ಆರಂಭವಾಗಿ ಹೆಚ್ಚಾಗಿ ಪ್ರಭಾವಗಳಿಸಿದ್ದು ಪಂಜಾಬಿನಲ್ಲಿ. ಈ ಧರ್ಮದ ಸ್ಥಾಪಕನಾದ ಗುರುನಾನಕ್ 1469ರಲ್ಲಿ ಲಾಹೋರ್ ಸಮೀಪದ ತಲವಂದಿಯಲ್ಲಿ ಖತ್ರಿ ಕುಲದಲ್ಲಿ ಜನಿಸಿದ. ಚಿಕ್ಕಂದಿನಲ್ಲೇ ಇವನ ಮನಸ್ಸು ಆಧ್ಯಾತ್ಮದ ಕಡೆಗೆ ತಿರುಗಿತು. ದೇವರೊಬ್ಬನೇ ಎಂದು ನಂಬಿ, ಆತನಲ್ಲಿ ಪ್ರೇಮವಿಟ್ಟು, ಆತನ ಧ್ಯಾನ ಮಾಡುವುದೊಂದೇ ನಿರ್ವಾಣಕ್ಕೆ ಹಾದಿ ಎಂದು ಅವನು ಸಾರಿದ. ವಿಗ್ರಹಾರಾಧನೆಯನ್ನು ಖಂಡಿಸಿದ. ಪಂಜಾಬಿನ ಜನರಿಗೆ ಈತ ಒಂದು ತತ್ತ್ವವನ್ನು ನೀಡಿ, ಅವರೆಲ್ಲ ಒಟ್ಟುಗೂಡುವಂತೆ ಮಾಡಿದ. ಅವರಿಗೆಲ್ಲ ಒಬ್ಬ ಗುರು ಅವಶ್ಯವೆಂದು ಅರಿತು ತನ್ನ ನಿಷ್ಠಾವಂತ ಶಿಷ್ಯನಾದ ಭಾಇಲಾಹ್ನನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ. ತನ್ನ ಆತ್ಮ ಅವನ ದೇಹವನ್ನು ಹೋಗುತ್ತದೆಂದು ಹೇಳಿದ. ಎರಡನೆಯ ಗುರು ಅಂಗದನೆನಿಸಕೊಂಡ. ಈತ ತನ್ನ ನೆಲೆಯನ್ನು ಕರ್ತಾರಪುರದಿಂದ ಅಮೃತಸರ ಜಿಲ್ಲೆಯ ಖದುರ್‍ಗೆ ಬದಲಾಯಿಸಿದ. ಗುರುಮುಖಿ ಲಿಪಿಯನ್ನು ಬೆಳೆಸಿ, ಅದರ ಮೂಲಕ ಸಿಖ್ ಧರ್ಮವನ್ನು ಗ್ರಂಥಸ್ಥಗೊಳಿಸಲು ಈತ ಶ್ರಮಿಸಿದ. ನಾನಕ್ ಕಲಿಸಿದ ಎರಡು ತತ್ತ್ವಗಳು ಸಮಗತ್ (ಸತ್ಸಂಗ-ಸಭೆ) ಮತ್ತು ಪಂಗತ್ (ಸಹಪಂಕ್ತಿ ಭೋಜನ). ಪಂಗತ್‍ಗಾಗಿ ಲಂಗರ್ ಎಂಬ ಸಾರ್ವಜನಿಕ ಅಡಿಗೆಶಾಲೆಗಳು-ಧರ್ಮಶಾಲೆಗಳು-ಅಸ್ತಿತ್ವಕ್ಕೆ ಬಂದುವು. ಮೂರನೆಯ ಗುರು ಅಮರದಾಸನಿಗೆ ಅಕ್ಬರ್ ಗೌರವ ಸಲ್ಲಿಸಿ, ಆತ ನಡೆಸುತ್ತಿದ್ದ ಲಂಗರ್‍ಗಾಗಿ ತೆರಿಗೆಮಾನ್ಯ ಗ್ರಾಮಗಳನ್ನು ದಾನ ಮಾಡಿದ. ಮಧ್ಯದಲ್ಲಿ ಕೊಳವಿದ್ದ ವಿಸ್ತಾರವಾದ ಭೂಮಿಯನ್ನು ಮುಂದಿನ ಗುರು ರಾಮದಾಸನಿಗೆ ಅಕ್ಬರ್ ಅಮೃತಸರದಲ್ಲಿ ನೀಡಿದ. ಇದೇ ಮುಂದೆ ಅಲ್ಲಿಯ ಸುವರ್ಣದೇವಾಲಯವಾಗಿ ಖ್ಯಾತಿ ಹೊಂದಿತು. ಅನಂತರ ಬಂದ ಗುರು ಅರ್ಜನ್ ಸಿಖ್ ಜನರಲ್ಲಿ ಶಿಸ್ತನ್ನು ರೂಪಿಸಿದ.  ಆದಿಗ್ರಂಥ ಅಥವಾ ಗ್ರಂಥಸಾಹಿಬ್ ಎಂಬುದು ಈತ ಸಿದ್ಧಪಡಿಸಿದ, ಸಿಖ್ ಧರ್ಮದ ಮೊದಲ ಗ್ರಂಥ. ಇದರ ಸಂಕಲನಕಾರ್ಯ 1604ರಲ್ಲಿ ಮುಗಿಯಿತು. ಗುರು ಅರ್ಜನ್ ಖುಸ್ರಾವನಿಗೆ ಆಶ್ರಯ ನೀಡಿದ್ದನೆಂಬ ಕಾರಣದಿಂದ ಜಹಾಂಗೀರ್ ಈತನನ್ನು ಹಿಂಸಿಸಿ ಕೊಲ್ಲಿಸಿದ. ಅನಂತರದ ಗುರು ಹರಗೋವಿಂದ. ಇವನು ಷಹಜಹಾನನೊಡನೆ ನಿರಂತರವಾಗಿ ಆರು ವರ್ಷಗಳ ಕಾಲ (1634-40) ಕಾದಬೇಕಾಯಿತು. ಈತ ಅಮೃತಸರ ಜಿಲ್ಲೆಯ ಉತ್ತರಭಾಗದಲ್ಲಿ ತನ್ನ ಹೆಸರಿನಲ್ಲಿ ಹರಗೋವಿಂದಪುರವನ್ನು ನೆಲೆಗೊಳಿಸಿದ. ಔರಂಗಜೇóಬ್ ಇಸ್ಲಾಮ್ ಧರ್ಮಪ್ರಚಾರಕನಾಗಿ ಪಂಜಾಬಿನ ಅನೇಕ ಗುರುದ್ವಾರಗಳನ್ನು ಮಸೀದಿಗಳಾಗಿ ಪರಿವರ್ತಿಸಿದ (1674-75). ಆಗಿನ ಗುರು ತೇಗ್ ಬಹದೂರನನ್ನು ದೆಹಲಿಗೆ ಕರೆಯಿಸಿ ಆತ ಇಸ್ಲಾಂ ಧರ್ಮವನ್ನು ಒಪ್ಪುವಂತೆ ಬಲವಂತಪಡಿಸಿದ. ಒಲ್ಲದ ಆತನನ್ನು ಸರಪಳಿಗಳಿಂದ ಕಟ್ಟಿ ಕೊಲ್ಲಿಸಿದ. ಅನಂತರದ ಗುರು ಗೋವಿಂದಸಿಂಹ. ಈತ ಶಾಂತಿಯುತ ಸಿಖ್ ಜನರನ್ನು ಸನ್ನದ್ಧ ಸೇನಾನಿಗಳಾಗಿ ಪರಿವರ್ತಿಸಿ ಮಹಮದೀಯರ ಆಕ್ರಮಣವನ್ನು ಎದುರಿಸಲು ಅವರನ್ನು ಸಿದ್ಧಗೊಳಿಸಿದ. ಕಟ್ಟುನಿಟ್ಟಾದ ಶಿಸ್ತನ್ನು ಅನುಸರಿಸಿದ ಅವರು ಖಿಲ್ಸ (ಪವಿತ್ರ) ಎನಿಸಿಕೊಂಡರು. ಉದ್ದಕೂದಲು, ನಕ್ಕರ್, ಕಬ್ಬಿಣದ ಬಳೆ, ಉಕ್ಕಿನ ಬಾಕು ಮತ್ತು ಬಾಚಣಿಗೆ ಇವು ಅವರೊಡನೆ ಎಂದೂ ಇರಬೇಕಾದ ಸಾಧನಗಳಾದುವು. ಸ್ಥಳೀಯ ಮೊಗಲ್ ಅಧಿಕಾರಿಗಳೊಡನೆ ಹೋರಾಟದಲ್ಲಿ ಈತ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡ. ಈತನನ್ನು ತಿವಿಯಲಾಯಿತು. ಸಾವು ಸಮೀಪಿಸಿತೆಂಬುದನ್ನರಿತ ಗೋವಿಂದಸಿಂಹ ಚಿತೆಯಲ್ಲಿ ಜೀವಂತ ಸಮಾಧಿ ಪಡೆದ (ಅಕ್ಟೋಬರ್ 1708). ಇದು ನಡೆದುದು ಮಹಾರಾಷ್ಟ್ರದ ನಾಂದೇಡದಲ್ಲಿ. ಅನಂತರ ಅಧಿಕಾರಕ್ಕೆ ಬಂದ ಬಂದಾ ಬಹಾದೂರ್ ಸರ್‍ಹಿಂದ್, ಸಟ್ಲೆಜ್ ಮತ್ತು ಯಮುನಾ ನದಿಗಳ ನಡುವಣ ಪ್ರದೇಶವನ್ನು ವಶಪಡಿಸಿಕೊಂಡು, ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಅಚ್ಚುಹಾಕಿಸಿದ. ಆದರೆ ಆಗಿನ ಮೊಗಲ್ ಅರಸ ಫರುಕ್‍ಸಿಯರ್ ಇತನ ವಿರುದ್ಧ ಸೈನ್ಯಾಚರಣೆ ನಡೆಸಿ ಇವನನ್ನು ಸೆರೆಹಿಡಿದು ದೆಹಲಿಗೆ ತರಿಸಿ ಆನೆಯಿಂದ ತುಳಿಯಿಸಿ ಸಾಯಿಸಿದ (1716). ಆದರೆ ಆವೇಳೆಗೆ ಸಿಕ್ಖರಲ್ಲಿ ಅಗಾಧ ಪರಿವರ್ತನೆಯಾಗಿತ್ತು. 

	1738ರಲ್ಲಿ ಪರ್ಷಿಯದ ನಾದಿರ್ ಷಾ ಮೊಗಲರ ಮೇಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ದಾಳಿ ಇಟ್ಟಾಗ ಪಂಜಾಬ್ ಪ್ರಾಂತ್ಯದಲ್ಲೆಲ್ಲ ಅಶಾಂತಿ ಅವ್ಯವಸ್ಥೆ ಉಂಟಾದುವು. ಒಂದು ದಶಕದೊಳಗೆ ಅಹ್ಮದ್ ಷಾ ಅಬ್ದಾಲಿ ಎಂಬ ಆಫ್‍ಘನ್ ಭಾರತದ ಮೇಲೆ ದಂಡೆತ್ತಿ ಬಂದ. ಇವನು ಮೊದಲು ಮಾನಪುರದಲ್ಲಿ ಸೋತರೂ (1748) ಎರಡು ವರ್ಷಗಳಲ್ಲಿ (1750) ಮತ್ತೆ ದಂಡೆತ್ತಿ ಬಂದು ಪಂಜಾಬನ್ನೆಲ್ಲ ವಶಪಡಿಸಿಕೊಂಡ. ಪಂಜಾಬಿನ ಜನರು ತಲ್ಲಣಿಸಿದರು. ಮೊಗಲರ ವಿರುದ್ಧ ಎಲ್ಲ ಕಡೆಗಳಲ್ಲೂ ದಂಗೆಗಳು ಎದ್ದುವು. ಇವರ ಮರಾಠರ ನೆರವು ಕೋರಿದರು. 1758ರಲ್ಲಿ ರಘುನಾಥರಾಯ ಪಂಜಾಬಿಗೆ ಬಂದು ಲಾಹೋರನ್ನು ಆಕ್ರಮಿಸಿ ಆಫ್‍ಘನ್ನರನ್ನು ಹೊರದೂಡಿದ. 1759ರಲ್ಲಿ ಅಬ್ದಾಲಿ ಮತ್ತೆ ದಂಡೆತ್ತಿ ಬಂದು ಪಂಜಾಬನ್ನು ಆಕ್ರಮಿಸಿದ. 1761ರಲ್ಲಿ ನಡೆದ 3ನೆಯ ಪಾಣಿಪತ್ ಕದನದಲ್ಲಿ ಆಫ್‍ಘನ್ನರ, ಮೊಗಲರ, ಮರಾಠರ ಇತಿಶ್ರೀ ಹಾಡಿದಂತಾಯಿತು.

	ರಣಜಿತ್‍ಸಿಂಹನ (1780-1839) ನೇತೃತ್ವದಲ್ಲಿ ಸಿಖ್ ಜನರೆಲ್ಲ ಮತ್ತೆ ಒಟ್ಟುಗೂಡಿದರು. ಆಫ್‍ಘನ್ ನಾಯಕ ಜಮಾನ್ ಷಹ ಪಂಜಾಬಿನ ಮೇಲೆ ನಡೆಸಿದ ದಾಳಿಗಳಿಂದ ಉಂಟಾದ ಅವ್ಯವಸ್ಥೆಯ ಪ್ರಯೋಜನ ಪಡೆದು ರಣಜಿತ್ ಲಾಹೋರನ್ನು ಆಕ್ರಮಿಸಿದ. ಅವನನ್ನು ಅದರ ಅಧಿಕಾರಿಯಾಗಿ ಜಮಾನ್ ಷಹ ಪರಿಗಣಿಸಬೇಕಾಯಿತು. ಅವರು ರಾಜಾ ಎಂಬ ಬಿರುದನ್ನೂ ಪಡೆದ. ಕ್ರಮೇಣ ಅವನು ಆಫ್‍ಘನ್ನರನ್ನು ಹೊರದೂಡಿದ. ಸಟ್ಲೆಜ್‍ವರೆಗಿನ ಸಿಖ್ ಮಿಸಲ್‍ಗಳ ನಾಯಕನಾಗಿ ಅವನು ಪರಿಗಣಿತನಾದ. ಅಮೃತಸರವನ್ನು ಆಕ್ರಮಿಸಿ ಝಮರಝಮ ಎಂಬ ತುಪಾಕಿಯನ್ನು ತನ್ನದಾಗಿಸಿಕೊಂಡ (1805). ಈ ವೇಳೆಗೆ ಭಾರತದ ಬಹು ಭಾಗವನ್ನಾಕ್ರಮಿಸಿದ್ದ ಬ್ರಿಟಿಷರು ರಣಜಿತನನ್ನು ಸಟ್ಲೆಜ್‍ನ ಉತ್ತರಕ್ಕಿರುವ ಎಲ್ಲ ಪಂಜಾಬ್ ಪ್ರದೇಶದ ಅಧಿಪತಿಯೆಂದು ಮಾನ್ಯಮಾಡಿದರು. ಸಿಕ್ಖರ ಅಂತಃಕಲಹಗಳನ್ನು ಹತ್ತಿಕ್ಕಲು ರಣಜಿತ್ 1807ರಲ್ಲಿ ಲೂಧಿಯಾನವನ್ನು ಆಕ್ರಮಿಸಿದ. ಇದು ಮೊದಲಿನ ಒಪ್ಪಂದಕ್ಕೆ ವಿರುದ್ಧವಾಗಿತ್ತೆಂದು ಬ್ರಿಟಿಷರು ಮೆಟ್‍ಕಾಫ್ ಮತ್ತು ಡೇವಿಡ್ ಆಕ್ಟರ್‍ಲೋನಿಯನ್ನು ಪಂಜಾಬಿಗೆ ಕಳುಹಿಸಿದರು. 1809ರ ಅಮೃತಸರದ ಒಪ್ಪಂದದಂತೆ ರಣಜಿತ್ ಸಟ್ಲೆಜ್‍ನ ಉತ್ತರ ಮತ್ತು ಪಶ್ಚಿಮ ಭಾಗಗಳಿಗೆ ತನ್ನ ಅಧಿಕಾರವನ್ನು ಸೀಮಿತಗೊಳಿಸಲು ಒಪ್ಪಿದ. ಅದೇ ಕ್ರಮೇಣ ಇವನು ಕಾಂಗ್ರಾ (1811), ಅಟಕ್ (1813), ಮುಲ್ತಾನ್ (1818), ಕಾಶ್ಮೀರ (1819) ಮತ್ತು ಪೆಷಾವರ್‍ಗಳನ್ನು (1823, 1834) ಆಕ್ರಮಿಸಿದ. ಇದರ ಪರಿಣಾಮವಾಗಿ ಪಂಜಾಬ್ ಸಿಕ್ಖರ ಪ್ರಬಲ ರಾಜ್ಯವಾಯಿತು. ಇವನ ಮರಣಾನಂತರ ಉಂಟಾದ ಅವ್ಯವಸ್ಥೆಯ ಪರಿಣಾಮವಾಗಿ ಸಿಕ್ಖರು ಬ್ರಿಟಿಷರೊಡನೆ ಎರಡು ಬಾರಿ, 1845-46 ಮತ್ತು 1848-49ರಲ್ಲಿ, ಹೋರಾಟ ನಡೆಸಿದರು. ಲಾರ್ಡ ಡಾಲ್ ಹೌಸಿ ಇದನ್ನು ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. 

	ಅನಂತರದ ಒಂದು ಶತಮಾನ ಕಾಲ ಪಂಜಾಬ್ ಭಾರತದ ಒಂದು ಪ್ರಾಂತ್ಯವಾಗಿ ಮುಂದುವರಿಯಿತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದಾಗ ದೇಶದ ವಿಭಜನೆಯಾಯಿತು. ಪಂಜಾಬ ಒಡೆಯಿತು. ಅದರ ಪಶ್ಚಿಮ ಭಾಗ ಪಾಕಿಸ್ತಾನಕ್ಕೂ ಪೂರ್ವಭಾಗ ಭಾರತಕ್ಕೂ ಸೇರಿದವು.										 (ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ